ಹಾಸನ:ಹಿಂದುತ್ವದ ಮುಖವಾಡ ಹಾಕಿಕೊಂಡು ಜನರಿಗೆ ಸುಳ್ಳು ಭರವಸೆಗಳನ್ನು ನೀಡುತ್ತಿರೋ ಬಿಜೆಪಿ ಪಕ್ಷಕ್ಕೆ ತತ್ವ ಸಿದ್ಧಾಂತವಿಲ್ಲ. ಜತೆಗೆ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಭವಿಷ್ಯ ಇಲ್ಲ ಅಂತ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ (ಕೆಆರ್ಪಿಪಿ) ಸಂಸ್ಥಾಪಕ ಹಾಗೂ ಗಂಗಾವತಿ ಶಾಸಕ ಜನಾರ್ದನ್ ರೆಡ್ಡಿ ಭವಿಷ್ಯ ನುಡಿದಿದ್ದಾರೆ.
ಬೇಲೂರು ಚೆನ್ನಕೇಶವ ದೇವಾಲಯದಲ್ಲಿ ದೇವರ ದರ್ಶನ ಪಡೆದ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಹಿಂದಿನ ಮತ್ತು ಇಂದಿನ ಬಿಜೆಪಿ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಪಕ್ಷಕ್ಕಾಗಿ ತ್ಯಾಗ ಮಾಡಿದವರಿಗೆ ಮನ್ನಣೆ ನೀಡುವ ಕಾಲದಲ್ಲಿ ಬಿಜೆಪಿಗೆ ಜನರು ಬೆಂಬಲ ನೀಡುತ್ತಾ ಬಂದಿದ್ದಾರೆ. ಆದರೆ ಇಂದಿನ ಬಿಜೆಪಿ ಹಿರಿಯರನ್ನು ನಿರ್ಲಕ್ಷ್ಯ ಮಾಡಿದ ಹಿನ್ನೆಲೆ ಜನರು ಕೂಡ ಬಿಜೆಪಿಗೆ ತಕ್ಕ ಉತ್ತರ ನೀಡಿದ್ದಾರೆ ಎಂದರು.
ಲೋಕಸಭಾ ಚುನಾವಣೆಗೆ ಪಕ್ಷ ಸ್ಪರ್ಧಿಸಲಿದೆ : ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಕಟ್ಟಿದ್ದು ಬಿಜೆಪಿ ಪಕ್ಷದ ವಿರುದ್ಧವಲ್ಲ. ರಾಜ್ಯದ ಜನತೆಗೆ ಸದೃಢ ಮತ್ತು ಪಾರದರ್ಶಕ ಆಡಳಿತವನ್ನು ನೀಡಲು. ಬಸವಣ್ಣನವರ ಆಶೋತ್ತರದಂತೆ ಹೊಸ ಪಕ್ಷವನ್ನು ಸ್ಥಾಪಿಸಲಾಗಿದೆ. ಪಕ್ಷವನ್ನು ಸಂಘಟನೆ ಮಾಡಲು ನಿರ್ಧಾರ ಮಾಡಿದ್ದು, ಲೋಕಸಭೆ ಚುನಾವಣೆಗೂ ಪಕ್ಷ ಸ್ಪರ್ಧಿಸಲಿದೆ ಎಂದರು.
ಬೇರೆಯವರಿಗೆ ಹೊಡೆತ ನೀಡಲು ನಾನು ಪಕ್ಷವನ್ನು ಸ್ಥಾಪನೆ ಮಾಡಿಲ್ಲ. ಆದರೆ ನನಗೆ ನಂದೇ ಆದಂತಹ ಸಿದ್ಧಾಂತವಿದೆ. ನನಗೆ ಕರ್ನಾಟಕ ರಾಜ್ಯದ ಬಗ್ಗೆ ಆಸೆ ಆಕಾಂಕ್ಷೆಗಳಿವೆ. ಆ ನಿಟ್ಟಿನಲ್ಲಿ ನಾನು ಪಕ್ಷವನ್ನು ರಚನೆ ಮಾಡಿದ್ದೇನೆ. ಅದರಿಂದ ಯಾರಿಗೆ ಹೊಡೆತ ಬಿದ್ದಿದೆ. ಇಲ್ಲ ಎಂಬುದರ ಬಗ್ಗೆ ನಾನು ಯೋಚನೆ ಮಾಡಿಲ್ಲ. ನನ್ನ ಪಕ್ಷ ಹಾಗೂ ಸಂಘಟನೆಯನ್ನು ಮಾಡಿಕೊಂಡು ಬಂದಿದ್ದೇನೆ ಎಂದು ರೆಡ್ಡಿ ಹೇಳಿದ್ರು.
ಸಿದ್ದರಾಮಯ್ಯ ಅನುಭವಿ ರಾಜಕಾರಣಿ : ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆ ಜನತೆಯನ್ನು ಗೊಂದಲಕ್ಕೆ ಸಿಲುಕಿಸಿದೆ. ಚುನಾವಣೆ ಪೂರ್ವ ಮತ್ತು ಈಗಿನ ಮಾತಿಗೂ ಬಹಳ ವ್ಯತ್ಯಾಸವಿದೆ. ಸಿದ್ದರಾಮಯ್ಯ ಅನುಭವಿ ರಾಜಕಾರಣಿ. ಹೀಗಾಗಿ ಅವರು ನೀಡಿರುವ ಗ್ಯಾರಂಟಿಗಳನ್ನು ಯಥಾವತ್ತಾಗಿ ನೀಡಬೇಕು ಅಂತ ಒತ್ತಾಯ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಹಾಸನ, ಚಿಕ್ಕಮಗಳೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡುತ್ತೇನೆ ಎಂದು ಜನಾರ್ದನ್ ರೆಡ್ಡಿ ಹೇಳಿದರು.
80 ಆಸ್ತಿಗಳನ್ನು ಬಿಡುಗಡೆ ಮಾಡಿದ್ದಾರೆ:ನೋಡಿ ನನ್ ಮೇಲೆ ದಾಖಲಾದ 152 ಆಸ್ತಿಗಳನ್ನು ಮುಟ್ಟುಗೋಲು ಹಾಕಬೇಕೆಂದು ಸಿಬಿಐನವರು ಸಿಬಿಐ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ವಿಚಾರಣೆ ಮಾಡಿದ ಕೋರ್ಟ್, 80 ಆಸ್ತಿಗಳು ಪ್ರಕರಣಕ್ಕೆ ಯಾವುದೇ ರೀತಿಯ ಸಂಬಂಧ ಬರಲ್ಲ, ಇನ್ನೂ 72 ಪ್ರಕರಣ ಸಂಬಂಧ ಇದೆ ಎಂದಲ್ಲ. ಪ್ರಕರಣ ಆದ ಸಂದರ್ಭದ ನಂತರ ತೆಗೆದುಕೊಂಡಿರುವ ಆಸ್ತಿಗಳಾಗಿರುವ ಕಾರಣ, ಕೇಸ್ ಇತ್ಯರ್ಥವಾಗುವವರೆಗೆ ನಾನು ಎಲ್ಲೂ ಕೂಡಾ ಮಾರುವ ಹಾಗಿಲ್ಲ ಎಂದು ಹೇಳಿ 80 ಆಸ್ತಿಗಳನ್ನು ಬಿಡುಗಡೆ ಮಾಡಿದ್ದಾರೆ. ಉಳಿದಂತೆ ಪ್ರಕರಣ ಸದ್ಯದಲ್ಲೇ ಸಿಬಿಐ ನ್ಯಾಯಾಲಯದಲ್ಲಿ ನಡೆಯುತ್ತಿದೆ ನೋಡೋಣ, ಏನಾಗುತ್ತೆ ಅಂತ ತಿಳಿಸಿದರು.
ಇದನ್ನೂ ಓದಿ:Anna Bhagya Scheme: 'ಪುಕ್ಸಟ್ಟೆ ಅಕ್ಕಿ ಕೊಡುವಂತೆ ನಾವು ಕೇಳಿಲ್ಲ'- ಕೇಂದ್ರದ ವಿರುದ್ಧ ಡಿ.ಕೆ.ಶಿವಕುಮಾರ್ ವಾಗ್ದಾಳಿ