ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ಭಾಗ್ಯ ಕರುಣಿಸೋ, ಹಾಸನದ ಅಧಿದೇವತೆ ಹಾಸನಾಂಬೆ ದರ್ಶನಕ್ಕೆ ಕೌಂಟ್ ಡೌನ್ ಶುರುವಾಗಿದೆ. ನ.2ರಂದು ಹಾಸನಾಂಬೆ ದೇಗುಲದ ಬಾಗಿಲು ತೆರೆಯಲಿದ್ದು, ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಭಾನುವಾರ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಯಿತು.
ಸಭೆ ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಸತ್ಯಭಾಮ ಸಿ, ಈ ವರ್ಷ ಒಟ್ಟು 14 ದಿನ ದೇಗುಲದ ಬಾಗಿಲು ತೆರೆದಿರಲಿದ್ದು ಮೊದಲ ಹಾಗೂ ಕೊನೆಯ ದಿನ ಹೊರತುಪಡಿಸಿ ಉಳಿದ 12 ದಿನಗಳು 24 ಗಂಟೆಯೂ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸ್ಥಳೀಯ ಶಾಸಕ ಸ್ವರೂಪ್ ನೇತೃತ್ವದಲ್ಲಿ ತಯಾರಿ ಪರಿಶೀಲನೆ ನಡಸಿದ ಅಧಿಕಾರಿಗಳ ತಂಡ, ಈ ವರ್ಷ ದೇವಿ ದರ್ಶನಕ್ಕೆ ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡಲಾಗಿದೆ, ದೇಗುಲದ ಗರ್ಭಗುಡಿಯೊಳಗೆ ಯಾರಿಗೂ ಹೆಚ್ಚಿನ ಸಮಯ ಪೂಜೆ, ವಿಶೇಷ ಅರ್ಚನೆಗೆ ಅವಕಾಶ ಇಲ್ಲ.
ಗಂಟೆಗಳ ಕಾಲ ಸರತಿ ಸಾಲಿನಲ್ಲಿ ಬಂದು ದೇವಿ ದರ್ಶನಕ್ಕೆ ಆಗಮಿಸೋ ಭಕ್ತರಿಗೆ ಸಮಸ್ಯೆ ಆಗದಂತೆ ಕ್ರಮ ವಹಿಸಲಾಗಿದ್ದು ಮೊದಲ ದಿನ ಆದಿ ಚುಂಚನಗಿರಿ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ದೇಗುಲದ ಬಾಗಿಲು ತೆರೆಯಲಿದ್ದು ಮೊದಲ ದಿನ ನೈವೇದ್ಯ ಪೂಜೆ ಬಳಿಕ ಮರುದಿನ ಬೆಳಗ್ಗೆಯಿಂದಲೇ ಹಾಸನಾಂಬೆ ದರ್ಶನಕ್ಕೆ ಅವಕಾಶ ಸಿಗಲಿದೆ ಎಂದು ತಿಳಿಸಿದ್ದಾರೆ.
ಐಜಿಪಿ ಬೋರಲಿಂಗಯ್ಯ ಅವರು ಮಾತನಾಡಿ, ಈ ಬಾರಿ ಹಾಸನಾಂಬೆ ಜಾತ್ರಾ ಮಹೋತ್ಸವ ಹಿನ್ನೆಲೆ ಬಂದೋಬಸ್ತ್ಗೆ 1200ಕ್ಕೂ ಹೆಚ್ಚಿನ ಪೊಲೀಸರನ್ನ ನಿಯೋಜನೆ ಮಾಡಲಾಗುವುದು. ಹೊರ ಜಿಲ್ಲೆಯಿಂದಲು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ನಿಯೋಜನೆ ಮಾಡಲು ನಿರ್ಧರಿಸಿದ್ದು, ಮೂರು ಪಾಳಯದಲ್ಲಿ ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಮೊದಲು ರಾತ್ರಿ 11 ಗಂಟೆಯವರೆಗೂ ಮಾತ್ರ ದೇವಿಯ ದರ್ಶನಕ್ಕೆ ಅವಕಾಶವಿತ್ತು. ಈ ಬಾರಿ ಲಕ್ಷಾಂತರ ಭಕ್ತರು ಬರುವುದರಿಂದ ಅವರ ಅನುಕೂಲಕ್ಕಾಗಿ ದಿನದ 24 ಗಂಟೆಗಳ ಕಾಲ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಶಕ್ತಿಯೋಜನೆಯಿಂದ ಲಕ್ಷಾಂತರ ಭಕ್ತರ ಆಗಮನ:ದೇವರ ಮುಡಿಗಿಟ್ಟ ಹೂ ಬಾಡೋದಿಲ್ಲ, ಬಾಗಿಲು ಮುಚ್ಚೋದಿನ ಹಚ್ಚಿಟ್ಟ ದೀಪ ಆರೋದಿಲ್ಲ ಎನ್ನೋ ನಂಬಿಕೆಯಿಂದಲೇ ಹಾಸನಾಂಬೆ ದರ್ಶನಕ್ಕೆ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಬರ್ತಾರೆ. ಸರ್ಕಾರ ಶಕ್ರಿ ಯೋಜನೆ ಜಾರಿ ಮಾಡಿರುವುದುರಿಂದ ಈ ಬಾರಿ ಭಕ್ತರ ಸಂಖ್ಯೆ ಹೆಚ್ಚುಗೊಳ್ಳಲಿದೆ.
ಡಿಸಿ ಕಚೇರಿಯಲ್ಲಿ ಸಭೆ: ಡಿಸಿ ಕಚೇರಿಯಲ್ಲಿ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ಆಗಿರೋ ತಯಾರಿಗಳ ಬಗ್ಗೆ ಸಭೆ ನಡೆಸಿದ ಶಾಸಕರು ಹಾಗೂ ಜಿಲ್ಲಾಧಿಕಾರಿಯವರು ಸೂಕ್ತ ವ್ಯವಸ್ಥೆಗಳನ್ನ ಮಾಡಿಕೊಳ್ಳಲು ಸೂಚನೆ ನೀಡಿದ್ದಾರೆ. ಈ ವರ್ಷ ಕೂಡ ವಿಶೇಷ ದರ್ಶನಕ್ಕೆ 1000 ಹಾಗು 300 ರೂ ಗಳ ಪಾಸ್ ನಿಗದಿ ಮಾಡಲಾಗಿದ್ದು ಈ ಪಾಸ್ ಗಳ ದುರುಪಯೋಗ ತಡೆಯಲು ಕ್ಯೂ ಆರ್ ಕೋಡ್ ವ್ಯವಸ್ಥೆ ಮಾಡಲಾಗಿದೆ. ವರ್ಷಕ್ಕೊಮ್ಮೆ ದರ್ಶನ ನೀಡೋ ಹಾಸನಾಂಬೆ ನೋಡಲು ಸಹಜವಾಗಿಯೇ ಎಲ್ಲರಿಗೂ ಕುತೂಹಲ ಇರುತ್ತೆ. ಹಾಗಾಗಿಯೇ ಎಲ್ಲರಿಗೂ ದೇವಿ ದರ್ಶನಕ್ಕೆ ಬೇಕಾದ ವ್ಯವಸ್ಥೆ ಆಗಲಿ ಎಂದು ಉಪವಿಭಾಗಾಧಿಕಾರಿ ತಿಳಿಸಿದರು.
ಇದನ್ನೂ ಓದಿ:ಬೆಂಗಳೂರಿನ ಬಿಜೆಪಿ ಕಚೇರಿಗೆ ನಾಗಸಾಧುಗಳ ಭೇಟಿ: ವಿಡಿಯೋ