ಹಾಸನ: ಬಸವಕಲ್ಯಾಣ ಉಪಚುನಾವಣೆ ಮುಂದಿಟ್ಟುಕೊಂಡು ಈ ಪ್ರಾಧಿಕಾರ ಮಾಡಿದ್ದಾರೆ. ಹಣವಿಡದೆ ಕೇವಲ ಹೆಸರಿಗಷ್ಟೇ ಪ್ರಾಧಿಕಾರ ಮಾಡಿದ್ದಾರೆ ಎಂದು ಮರಾಠ ಪ್ರಾಧಿಕಾರ ರಚನೆ ವಿಚಾರವಾಗಿ ಸಂಸದ ಪ್ರಜ್ವಲ್ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ದಿಶಾ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಶಿರಾ ಉಪಚುನಾವಣೆ ಸಂದರ್ಭದಲ್ಲಿ ಕಾಡುಗೊಲ್ಲರ ನಿಗಮ ಮಾಡಿದ್ದರು. ಈವರೆಗೂ ಈ ನಿಗಮಗಳಿಗೆ ಹಣ ಬಿಡುಗಡೆಯಾಗಿಲ್ಲ ಎಂದು ಸರ್ಕಾರದ ನಡೆ ವಿರುದ್ಧ ಅಸಮಾಧಾನಗೊಂಡರು.
ಕಾರವಾರ, ಬೆಳಗಾವಿ ಸೇರಿ ಕರ್ನಾಟಕದ ಕೆಲ ಭಾಗಗಳು ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಮಹಾರಾಷ್ಟ್ರ ಡಿಸಿಎಂ ಕ್ಯಾತೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರದಲ್ಲಿ ನಮ್ಮ ಸಂಸದರು ಸರಿಯಾಗಿ ಮಾತನಾಡಿ ಉತ್ತರ ಕೊಡಬೇಕು. ಈ ಹಿಂದಿನಿಂದಲೂ ಮಹಾರಾಷ್ಟ್ರ ಕ್ಯಾತೆ ತೆಗೆಯುತ್ತಿದೆ. ಪಕ್ಷಾತೀತವಾಗಿ ಕನ್ನಡದ ನಾಡು ಗಡಿ ಉಳಿಸಲು ನಾನು ಬದ್ಧನಿದ್ದೇನೆ ಎಂದರು.
ನಮ್ಮ ನಾಡು, ಭಾಷೆ ವಿಚಾರದಲ್ಲಿ ನಾನು ಯಾವಾಗಲೂ ಹೋರಾಡಲು ಸಿದ್ಧನಾಗಿದ್ದೇನೆ. ಸರ್ಕಾರದ ಜೊತೆಯಿದ್ದು ನಾನು ಹೋರಾಟ ಮಾಡುತ್ತೇನೆ ಎಂದರು. ದಿಶಾ ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಿ ಕ್ರಮ ಜರುಗಿಸುವಂತೆ ಜಿಪಂ ಸಿಇಒ ಪರಮೇಶ್ ಅವರಿಗೆ ಸೂಚನೆ ನೀಡಿದರು.