ಹಾಸನ:ಯಾವಾಗ್ಲೂ ಮೋಬೈಲ್ ನೋಡುವುದನ್ನ ಬಿಟ್ಟು ಓದ್ಕಳಪ್ಪಾ ಅಂತಾ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ವಿದ್ಯಾರ್ಥಿಯೋರ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ಬುದ್ಧಿವಾದ ಹೇಳಿದ ತಂದೆ-ತಾಯಿ: ಮನನೊಂದು ಕೆರೆಗೆ ಹಾರಿದ ವಿದ್ಯಾರ್ಥಿ - ಅಗ್ನಿ ಶಾಮಕದಳದ ಸಿಬ್ಬಂದಿ
ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆದಿದ್ದಾನೆಂದು ತಂದೆ-ತಾಯಿ ಬುದ್ಧಿವಾದ ಹೇಳಿದ್ದು, ಇದರಿಂದ ಮನನೊಂದ ವಿದ್ಯಾರ್ಥಿಯೋರ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ವಿಜಯ ಶಾಲೆಯಲ್ಲಿ ಒಂಭತ್ತನೇ ತರಗತಿ ಓದುತ್ತಿದ್ದ ಅಮಿತ್ ಮೃತ ವಿದ್ಯಾರ್ಥಿ. ಮಂಗಳವಾರ ಸಂಜೆ ಶಾಲೆಯಿಂದ ಮನೆಗೆ ಹಿಂತಿರುಗಿದ ಅಮಿತ್, ಎಂದಿನಂತೆ ಆಟವಾಡಿ ಮನೆಗೆ ಬಂದಿದ್ದಾನೆ. ಆತ ಪರೀಕ್ಷೆಯಲ್ಲಿ ಕಡಿಮೆ ಅಂಕ ತೆಗೆದಿದ್ದಾನೆಂದು ಆತನ ತಂದೆ-ತಾಯಿ ನೀನು ಮೊಬೈಲ್ ನೋಡುವುದು ಜಾಸ್ತಿಯಾಗಿದೆ. ಓದಿನ ಕಡೆ ಗಮನ ಹರಿಸುತ್ತಿಲ್ಲ. ಅದಕ್ಕೆ ಕಡಿಮೆ ಅಂಕ ತೆಗೆದಿದ್ದೀಯ. ನೀನು ಓದಿ ಒಳ್ಳೆ ಕೆಲಸ ತಗೋತೀಯಾ ಅಂತೆಲ್ಲಾ ಕನಸನ್ನಿಟ್ಟುಕೊಂಡಿದ್ದೀವಿ ಎಂದು ಬುದ್ಧಿಮಾತು ಹೇಳಿದ್ದಾರೆ.
ಇದರಿಂದ ಮನನೊಂದ ಅಮಿತ್ ರಾತ್ರಿಯಾಗುತ್ತಿದ್ದಂತೆ ಲೇಸ್ ತರುತ್ತೇನೆಂದು ₹10 ತೆಗೆದುಕೊಂಡು ಹೋದವನು, ತಂದೆ ಹರೀಶ್‌ಗೆ ಕರೆ ಮಾಡಿ ಸತ್ಯಮಂಗಲ ಕೆರೆಗೆ ಧುಮುಕಿದ್ದಾನೆ. ಕೂಡಲೇ ಗಾಬರಿಯಿಂದ ಮನೆಯವರು ಕೆರೆಯತ್ತ ಓಡಿ ಬಂದು ಎಷ್ಟೇ ಹುಡುಕಿದ್ರು ಅಮಿತ್ ಪತ್ತೆಯಾಗಿಲ್ಲ. ನಂತರ ಬುಧವಾರ ಪೊಲೀಸರಿಗೆ ದೂರು ನೀಡಿದ್ದಾರೆ. ಅಗ್ನಿ ಶಾಮಕದಳದ ಸಿಬ್ಬಂದಿ ದಿನವಿಡೀ ಕಾರ್ಯಾಚರಣೆ ನಡೆಸಿದ್ರೂ ಅಮಿತ್ ಚಪ್ಪಲಿ ಹೊರತುಪಡಿಸಿ ಮತ್ತಾವ ಕುರುಹು ಪತ್ತೆಯಾಗಿಲ್ಲ. ಇಂದು ಸಂಜೆಯ ವೇಳೆಗೆ ಅಮಿತ್‌ನ ಮೃತದೇಹ ತೇಲಿಕೊಂಡು ದಡದತ್ತ ಬಂದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.