ಹಾಸನ:ಧರ್ಮಸ್ಥಳ ಮಂಜುನಾಥನ ದರ್ಶನ ಮುಗಿಸಿಕೊಂಡು ವಾಪಸ್ ಆಗುತ್ತಿದ್ದ ಟಿಟಿ ವಾಹನವೊಂದು ಭೀಕರ ಸರಣಿ ಅಪಘಾತಕ್ಕೀಡಾಗಿದ್ದು, ನಾಲ್ವರು ಮಕ್ಕಳು ಸೇರಿದಂತೆ 9 ಮಂದಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಜಿಲ್ಲೆಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಅರಸೀಕೆರೆ ತಾಲೂಕಿನ ಬಾಣವಾರ ಹೋಬಳಿ ಗಾಂಧಿ ನಗರ ಗ್ರಾಮದ ಬಳಿಯ ಶಿವಮೊಗ್ಗ-ಅರಸೀಕೆರೆಯ ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ಈ ಘೋರ ದುರಂತ ಸಂಭವಿಸಿದೆ.
ಲೀಲಾವತಿ (50), ಚೈತ್ರಾ (33), ಸಮರ್ಥ್ (10), ಡಿಂಪಿ (12), ತನ್ಮಯ್ (10), ಧ್ರುವ (2), ವಂದನಾ (20), ದೊಡ್ಡಯ್ಯ (60), ಭಾರತಿ (50) ಮೃತ ದುರ್ದೈವಿಗಳು. ಮೃತರೆಲ್ಲರೂ ಅರಸೀಕೆರೆಯ ಸಾಲಾಪುರದವರಾಗಿದ್ದಾರೆ. ಲಾರಿ ಮತ್ತು ಸಾರಿಗೆ ಬಸ್ ಮಧ್ಯೆ ಟಿಟಿ ವಾಹನ ಸಿಲುಕಿ ಸಂಪೂರ್ಣ ನಜ್ಜುಗುಜ್ಜಾಗಿದೆ.
ಹಾಸನ ಬಳಿ ಭೀಕರ ಅಪಘಾತಕ್ಕೆ 9 ಮಂದಿ ಸಾವು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಮಂಜುನಾಥನ ದರ್ಶನ ಪಡೆದುಕೊಂಡು ವಾಪಸ್ ತಮ್ಮ ಗ್ರಾಮಕ್ಕೆ ಹಿಂದಿರುಗುತ್ತಿದ್ದರು. ಶಿವಮೊಗ್ಗ- ಅರಸೀಕೆರೆಯ ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ಟಿಟಿ ವಾಹನ ಬರುತ್ತಿದ್ದಾಗ ಸಾರಿಗೆ ಬಸ್ ಮತ್ತು ಟ್ಯಾಂಕರ್ ಮಧ್ಯೆ ಸಿಲುಕಿ ಅಪ್ಪಚ್ಚಿಯಾಗಿದೆ. ಜವರಾಯನ ಅಟ್ಟಹಾಸಕ್ಕೆ ವಾಹನದಲ್ಲಿದ್ದ 14 ಮಂದಿ ಪೈಕಿ 9 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರಲ್ಲಿ ನಾಲ್ವರು ಮಕ್ಕಳು ಕೂಡ ಇದ್ದಾರೆ.
ಇನ್ನೇನು ಐದಾರು ಕಿಲೋಮೀಟರ್ ಸಾಗಿದ್ರೆ ಮನೆ ಸೇರುತ್ತಿದ್ದರು. ಆದ್ರೆ ಅಷ್ಟರಲ್ಲೇ ಜವರಾಯ ಅಟ್ಟಹಾಸ ಮೆರದಿದ್ದಾನೆ. ಘಟನೆಯಲ್ಲಿ ಗಾಯಗೊಂಡವರನ್ನು ಹಾಸನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಾಳಕ್ಕೆ ಬಾಣಾವರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಓದಿ:ಬ್ರೇಕ್ ಫೇಲ್ ಆಗಿ ಉರುಳಿ ಬಿದ್ದ ಬಸ್... 20 ಮಂದಿ ದಾರುಣ ಸಾವು