ಹಾಸನ: ಶಿರಾ ಉಪ ಚುನಾವಣೆ ಹೋರಾಟ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ನೇತೃತ್ವ ಸೇರಿದಂತೆ ಹಲವರ ಒಗ್ಗಟ್ಟಿನ ಫಲ ಎಂದು ಶಾಸಕ ಪ್ರೀತಂ ಜೆ. ಗೌಡ ಹೇಳಿದ್ದಾರೆ.
ಹಾಸನಾಂಬೆ ದರ್ಶನ ಮುಗಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನದ ನಾಯಕರೆಲ್ಲ ಬಂದು ಶಿರಾ ನಮ್ಮದೇ ಕ್ಷೇತ್ರ ಎಂದು ಪ್ರಚಾರ ಮಾಡಿದ್ರು. ಆದರೆ ಪ್ರೀತಂ ಗೌಡ ಕ್ಷೇತ್ರದ ಅಭಿವೃದ್ಧಿ ಬಿಟ್ಟು ಶಿರಾದಲ್ಲಿ ಕುಳಿತಿದ್ದಾರೆ ಎಂದು ಟೀಕೆ ಮಾಡಿದ್ರು. ಮಾರನೇ ದಿನವೇ ಈ ರೀತಿ ಹೇಳಿಕೆ ನೀಡಿದವರೆಲ್ಲ ಬಂದು ಶಿರಾದಲ್ಲೇ ಕುಳಿತಿದ್ರು. ಅದರಲ್ಲೇ ಅವರ ದ್ವಂದ್ವ ನೀತಿ ಏನೆಂದು ತಿಳಿಯಲಿದೆ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದರು.
ಪಾಪ ನಮ್ಮ ಯುವ ನಾಯಕರು ಯಾವ ಹೋಬಳಿ ಜವಾಬ್ದಾರಿ ತಗೊಂಡಿದ್ರೋ ಅದರಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಮುಂಬರುವ ದಿನಗಳಲ್ಲಿ ರಾಜಕಾರಣದಲ್ಲಿ ಹೆಚ್ಚು ಶಕ್ತಿ ಬೆಳೆಸಿಕೊಳ್ಳುವ ಬುದ್ಧಿ ಆ ದೇವರು ಕೊಡಲಿ. ತಾತನ ಹೆಸರೇಳಿಕೊಂಡು ಲೋಕಸಭಾ ಸದಸ್ಯರಾಗಿದ್ದಾರೆ. ಆದರೆ ಬೇರೆ ಕ್ಷೇತ್ರದಲ್ಲಿ ಮಂತ್ರಕ್ಕೆ ಮಾವಿನಕಾಯಿ ಉದುರಲ್ಲ ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕು. ಕಥೆ ಹೇಳಿದ್ರೆ ಜನ ವೋಟು ಹಾಕಲ್ಲ. ಇವರಿಗೆ ವೋಟು ಹಾಕಿ ಬೇಸರವಾಗಿ ಜನ ನಂಬಿಕಸ್ಥರನ್ನು ಹುಡುಕುತ್ತಿದ್ದರು ಎಂದು ಜೆಡಿಎಸ್ ಯುವ ಮುಖಂಡ, ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದರು.