ಹಾಸನ: ಎಲ್ಲಾ ಚುನಾವಣೆಯಲ್ಲೂ ಕೈ ಕೊಟ್ರಿ. ಈ ಚುನಾವಣೆಯಲ್ಲಿ ಮತ್ತೆ ನನಗೆ ಕೈ ಕೊಟ್ಟರೇ, ನಾನು ನಿಮಗೆ ಕೈ ಕೊಡ್ತೀನಿ. ಕಾಲು ಕೊಡ್ತೀನಿ. ನಿಮ್ಮ ಯಾವುದೇ ಕೆಲಸವನ್ನು ಮಾಡಿಕೊಡದೇ ನಮ್ಮ ಮನೆ ಮುಂದೆ ಬಂದಾಗ ಕಾಫಿ ಕುಡಿಸಿ ವಾಪಸ್ ಮನೆಗ್ ಕಳಿಸ್ತೀನಿ. ಹೀಗೆ ಪ್ರೀತಂ ಗೌಡ ಮತದಾರರಿಗೆ ವೋಟ್ ನನಗೆ ಹಾಕ್ಬೇಕು ಅಂತ ರಾತ್ರಿವೇಳೆ ಮತದಾರರಿಗೆ ತಾಕೀತು ಮಾಡಿದ್ದಾರೆ ಎನ್ನಲಾದ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ನಗರದ ಶ್ರೀನಗರ ಬಡಾವಣೆಯಲ್ಲಿ ರಸ್ತೆ ಮತ್ತು ಅಭಿವೃದ್ಧಿ ಚರಂಡಿಗಳಿಗೆ ಕಾಮಗಾರಿಗಳ ಪರಿವೀಕ್ಷಣೆ ಸಂದರ್ಭದಲ್ಲಿ ಸ್ಥಳೀಯ ಮಹಿಳೆಯೊಂದಿಗೆ ಮಾತನಾಡುತ್ತಾ ಇದ್ದ ಸಂದರ್ಭದಲ್ಲಿ, ವೋಟ್ ಹಾಕ್ತಿವಿ ಅಣ್ಣ ಅಂತ ಹೇಳಿ ಕಾಂಗ್ರೆಸ್ ಹಾಗೂ ದಳದವರಿಗೆ ಓಟ್ ಹಾಕಿದ್ರೆ, ಕೆಲಸ ಮಾಡಿದ ಬಿಜೆಪಿ ಪಕ್ಷದ ನನಗೆ ಉರಿದು ಹೋಗುತ್ತೆ. ನಾನು ಚಿಕ್ಕ ಮಕ್ಕಳಿಗೆ ಹೇಳುವ ರೀತಿ ಹೇಳುತ್ತಿದ್ದೇನೆ. ಮುಸಲ್ಮಾನ್ ಬಾಂಧವರು ನನ್ನ ಅಣ್ಣ ತಮ್ಮಂದಿರು ಅಂತ ತಿಳಿದುಕೊಂಡು ನಾನು ನಿಮ್ಮಲ್ಲಿ ಮಾತನಾಡುತ್ತಿದ್ದೇನೆ. ನೀವು ಕೂಲಿ ಕೆಲಸ ಮಾಡಿ ಸಂಜೆ ಹೊತ್ತಿಗೆ ಕೂಲಿ ಕೊಡದಿದ್ದರೆ ನಿಮಗೆ ಬೇಜಾರಾಗುತ್ತೆ ಅಲ್ವಾ?. ಹಾಗೆ ನಾನು ಅಭಿವೃದ್ಧಿ ಕೆಲಸ ಮಾಡಿ ನನಗೆ ವೋಟ್ ಕೊಡದಿದ್ದರೆ ನನಗೂ ಬೇಜಾರಾಗುತ್ತೆ ಎಂದಿದ್ದಾರೆ.
ಬಿಜೆಪಿಗೆ ವೋಟ್ ಹಾಕಲೇಬೇಕು: ಈಗಾಗಲೇ ಮೂರು ಬಾರಿ ನಿಮ್ಮ ಬಿಜೆಪಿ ಪಕ್ಷಕ್ಕೆ ವೋಟ್ ಹಾಕದೆ ಕೈಕೊಟ್ಟಿದ್ದೀರಿ. ಕಳೆದ ಎಂಎಲ್ಎ ಚುನಾವಣೆಯಲ್ಲಿ ನಗರಸಭೆ ಚುನಾವಣೆಯಲ್ಲಿ ಹಾಗೂ ಎಂಪಿ ಚುನಾವಣೆಯಲ್ಲಿ ಈಗ ಮತ್ತೆ ಆರು ತಿಂಗಳ ಬಳಿಕ ವಿಧಾನಸಭಾ ಚುನಾವಣೆ ಬರುತ್ತದೆ. ನಾನು ನಿಮ್ಮ ಬಡಾವಣೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ನೀವು ಬಿಜೆಪಿಗೆ ವೋಟ್ ಹಾಕಲೇಬೇಕು, ಇಲ್ಲಾಂದ್ರೆ ನಾನು ನೀವು ಹೇಗೆ ನನಗೆ ಕೈ ಕೊಟ್ಟಿದ್ದೀರೋ ಅದೇ ರೀತಿ ನಾನು ಕೈಕೊಡುತ್ತೇನೆ ಎನ್ನುವ ಮೂಲಕ ಮತವನ್ನ ಬಲವಂತವಾಗಿ ನನಗೆ ಹಾಕಬೇಕು ಅಂತ ತಾಕೀತು ಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.