ಹಾಸನ/ಅರಸೀಕೆರೆ:ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಬಂಧಿಸಿರೋ ಪ್ರಕರಣ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ನಡೆದಿದೆ.
ಹಾಸನ ನಗರದ ಹಡ್ಲಿಮನೆ ಬಡಾವಣೆಯ ಫೈಜ್ ಪಾಷಾ ಹಾಗೂ ಕಂತೇನಹಳ್ಳಿ ಬಡಾವಣೆಯ ರವಿ ಅಲಿಯಾಸ್ ಪಾಣಿ ಬಂಧಿತ ಅರೋಪಿಗಳು. ನಗರದ ಸಾರ್ವಜನಿಕ ಸ್ಥಳ, ಹಾಗೂ ಶಾಲಾ ಕಾಲೇಜು ಆವರಣದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಅರಸೀಕೆರೆ ನಗರ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅರಸೀಕೆರೆಯಲ್ಲಿ ಅಕ್ರಮ ಚಟುವಟಿಕೆಗಳ ಸದ್ದು ಪದೇ ಪದೆ ಕೇಳಿ ಬರುತ್ತಿದ್ದು, ವಿದ್ಯಾರ್ಥಿಗಳು, ಯುವಕರನ್ನು ದಾರಿ ತಪ್ಪಿಸುವ ಕೆಲಸ ನಿರಂತರವಾಗಿ ನಡೆಯುತ್ತಲೇ ಇದೆ. ಇತ್ತೀಚೆಗೆ ಪೊಲೀಸ್ ಮತ್ತು ಅಬಕಾರಿ ಠಾಣೆಯಲ್ಲಿ ಸರಣಿ ಪ್ರಕರಣಗಳು ದಾಖಲಾಗುತ್ತಿದ್ದು, ಸಾರ್ವಜನಿಕ ಸ್ಥಳ, ಶಾಲಾ ಕಾಲೇಜು ಆವರಣದಲ್ಲಿ ಗಾಂಜಾ ಮತ್ತು ಅಫೀಮು ಇನ್ನಿತರ ಕಾನೂನು ಬಾಹಿರ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರನ್ನು ನಗರ ಪೊಲೀಸರು ಬಂದಿಸಿದ್ದು, ಸುಮಾರು 200 ಗ್ರಾಂ ಗಾಂಜಾ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ನಗರ ಠಾಣೆ ಪಿಐ ಸೋಮೇಗೌಡ, ಸಿಬ್ಬಂದಿಗಳಾದ ಕೀರ್ತಿಕುಮಾರ್, ನವೀನ್, ಕುಮಾರ್, ಕಿರಣ್ ಕುಮಾರ್, ರಮೇಶ್, ಸಂಜೀವ ಚಾಲಕ ನಾಗರಾಜ್ ಮತ್ತಿತರು ಪಾಲ್ಗೊಂಡಿದ್ದರು.