ಹಾಸನ:ಜಿಲ್ಲೆಯ ಅಭಿವೃದ್ಧಿ ಬಗ್ಗೆ ಜೆಡಿಎಸ್ ಶಾಸಕರೆಲ್ಲಾ ಸೇರಿ ಸಭೆ ನಡೆಸಿ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೇವೆ. ಈ ಪತ್ರಕ್ಕೆ ಸಿಎಂ ಸ್ಪಂದಿಸದಿದ್ದರೆ ಶಾಂತಿಯುತ ಹೋರಾಟ ನಡೆಸುವುದಾಗಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹೇಳಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಎಂಬ ಮಹಾಮಾರಿ ಆವರಿಸಿ ಜನರು ತತ್ತರಿಸಿ ಹೋಗಿದ್ದಾರೆ. ಯಾವ ಅಭಿವೃದ್ಧಿ ಕೆಲಸ ಕಾರ್ಯಗಳೂ ಸಾಗುತ್ತಿಲ್ಲ. ಕೇವಲ ದ್ವೇಷದ ರಾಜಕಾರಣ ಮಾಡಿದರೆ ಜನತೆ ಏನು ಮಾಡಬೇಕು?. ಈ ಬಗ್ಗೆ ಜೆಡಿಎಸ್ ಪಕ್ಷದ ಶಾಸಕರೆಲ್ಲಾ ಸೇರಿ ಒಂದು ಸಭೆ ನಡೆಸಿ ತೀರ್ಮಾನವನ್ನು ಮುಖ್ಯಮಂತ್ರಿಗಳಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗುವುದು ಎಂದರು.
ನಮ್ಮ ಪತ್ರಕ್ಕೆ ಸ್ಪಂದಿಸದಿದ್ದರೆ ದೇವೇಗೌಡರೊಂದಿಗೆ ಶಾಂತಿಯುತವಾದ ಹೋರಾಟ ಮಾಡಬೇಕಾಗುತ್ತದೆ. ಇದುವರೆಗೂ ತಾಳ್ಮೆಯಿಂದ ಹನ್ನೆರಡು ತಿಂಗಳು ಕಾದಿದ್ದೇವೆ. ಆದರೆ ಜೆಡಿಎಸ್ ಶಾಸಕರು ಸುಮ್ಮನಿದ್ದಾರೆ ಎಂದು ಭಾವಿಸುವುದು ಸರಿಯಲ್ಲ. ದ್ವೇಷದ ರಾಜಕಾರಣ ಮುಂದುವರೆದರೆ ಹೋರಾಟ ಅನಿವಾರ್ಯವಾಗುತ್ತದೆ. ಸರ್ಕಾರದಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಸಮಯ ಬಂದಾಗ ಎಳೆ ಎಳೆಯಾಗಿ ಮುಂದೆ ತಿಳಿಸಲಾಗುವುದು ಎಂದು ಎಚ್ಚರಿಕೆ ಕೊಟ್ಟರು.
ಹಾಸನ-ಬೇಲೂರು-ಚಿಕ್ಕಮಗಳೂರು ರೈಲ್ವೆ ಮಾರ್ಗ, ವಿಮಾನ ನಿಲ್ದಾಣ ಸೇರಿದಂತೆ ಯಾವ ಕಾಮಗಾರಿಗಳು ಆರಂಭಗೊಂಡಿಲ್ಲ. ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ಅಭಿವೃದ್ಧಿ ಕಾಮಗಾರಿಗಳು, ದ್ವೇಷದ ರಾಜಕಾರಣದ ಬಗ್ಗೆ ಪತ್ರಿಕೆಗಳಲ್ಲಿ ಜಾಹಿರಾತು ನೀಡಬೇಕಾಗುತ್ತದೆ ಎಂದು ಟಾಂಗ್ ನೀಡಿದರು.
ಜುಲೈ ತಿಂಗಳು ಕಳೆದರೂ ಯಾವ ನಾಲೆಗಳಿಗೆ ನೀರು ಬಿಟ್ಟಿಲ್ಲ, ಸರ್ಕಾರ ಕೂಡಲೇ ನೀರಾವರಿ ಸಲಹಾ ಸಮಿತಿ ಸಭೆ ಕರೆಯಬೇಕು, ಹನ್ನೆರಡು ತಿಂಗಳಿಂದ ಯಾವುದೇ ಹೊಸ ನೀರಾವರಿ ಯೋಜನೆ ಆರಂಭಿಸಿಲ್ಲ, ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿರುವುದಾಗಿ ಆತಂಕ ವ್ಯಕ್ತಪಡಿಸಿದರು.