ಹಾಸನ: ಕಳ್ಳರು ಎಲ್ಲಿರುತ್ತಾರೆ ಅನ್ನೋದು ಪೊಲೀಸರಿಗೆ ಗೊತ್ತಿರುತ್ತೆ. ಅದೇ ರೀತಿ ತೆರಿಗೆ ಕಳ್ಳರು ಎಲ್ಲಿರುತ್ತಾರೆ ಎಂಬುದು ಐಟಿ ಇಲಾಖೆ ಅಧಿಕಾರಿಗಳಿಗೆ ತಿಳಿದಿರುತ್ತೆ ಎಂದು ಶಾಸಕ ಪ್ರೀತಂ ಜೆ ಗೌಡ ಹೇಳಿದರು.
ತೆರಿಗೆ ಕಳ್ಳರು ಎಲ್ಲಿರುತ್ತಾರೆ ಎಂದು ಐಟಿ ಇಲಾಖೆಗೆ ಗೊತ್ತಿರುತ್ತೆ: ಶಾಸಕ ಪ್ರೀತಂ ಗೌಡ - ಐಟಿ ಇಲಾಖೆ
ಇಂದು ನಡೆದ ಐಟಿ ದಾಳಿ ಕುರಿತು ಶಾಸಕ ಪ್ರೀತಂ ಗೌಡ ಪ್ರತಿಕ್ರಿಯೆ ನೀಡಿದ್ದು, ತೆರಿಗೆ ಕಳ್ಳರು ಎಲ್ಲಿರುತ್ತಾರೆ ಎಂದು ಐಟಿ ಇಲಾಖೆಗೆ ಗೊತ್ತಿರುತ್ತೆ. ಈ ಕುರಿತು ರಾಜಕಾರಣದಲ್ಲಿರು ಪ್ರಾಮಾಣಿಕರು ವಿಚಲಿತರಾಗಬೇಕಾಗಿಲ್ಲ ಎಂದು ಲೇವಡಿ ಮಾಡಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತೆರಿಗೆ ಕಳ್ಳರನ್ನು ಮಟ್ಟಹಾಕಲು ಇರುವ ಸಂಸ್ಥೆ ಆದಾಯ ತೆರಿಗೆ ಇಲಾಖೆ. ಯಾವ ಭಾಗದಲ್ಲಿ ತೆರಿಗೆ ಕಳ್ಳರಿದ್ದಾರೋ ಅಲ್ಲಿ ದಾಳಿ ಮಾಡುತ್ತಾರೆ. ಬಹುಶಃ ಇಲ್ಲಿ ಹೆಚ್ಚಿನತೆರಿಗೆ ಕಳ್ಳರು ಹಾಗೂ ಲೂಟಿ ಕೋರರಿರಬೇಕು. ಈ ಹಿನ್ನಲೆಯಲ್ಲಿ ಐಟಿ ದಾಳಿ ನಡೆದಿದೆ. ನನಗೆ ಸಂಪೂರ್ಣ ವಿಶ್ವಾಸವಿದೆ. ಯಾರು ರೈತರ ಮಕ್ಕಳು ಡೇರಿಯಲ್ಲಿ 10 ಹಸುಗಳನ್ನು ಇಟ್ಟುಕೊಂಡು 9 ಕೋಟಿ ಲಾಭ ಮಾಡುತ್ತಾರೋ ಅಥವಾ ಮೂರುವರೆ ಎಕರೆ ಜಮೀನು ಹೊಂದಿರುತ್ತಾರೊ ಅವರು ಹೆದರುವ ಅಗತ್ಯವಿಲ್ಲ. ಯಾರು ರಾಜ್ಯದ ಸಂಪತ್ತನ್ನು ಲೂಟಿ ಮಾಡಿರುತ್ತಾರೋ, ಗುತ್ತಿಗೆದಾರರ ಬಳಿ ಕಮಿಷನ್ ಪಡೆವವರು ಹಾಗೂ ವರ್ಗಾವಣೆ ದಂಧೆ ಮಾಡುತ್ತಾರೋಅಂತಹವರು ವಿಚಲಿತರಾಗಬೇಕು. ಐಟಿ ದಾಳಿ ಕುರಿತು ಸಚಿವ ರೇವಣ್ಣನವರು ವಿಚಲಿತರಾಗುವುದು ಸರಿಯಲ್ಲ ಎಂದು ಕುಟುಕಿದರು.
ಐಟಿ ದಾಳಿ ಕುರಿತು ಲಘುವಾಗಿ ಮಾತನಾಡಿರುವ ರೇವಣ್ಣನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಜಕಾಣದಲ್ಲಿ ಯಾವತ್ತೂ ಆಚಾರ, ವಿಚಾರ, ಸಂಸ್ಕತಿ ಇರಬೇಕು. ಏಕೆಂದರೆ ನಾವೆಲ್ಲ ಸಾರ್ವಜನಿಕ ಜೀವನದಲ್ಲಿ ಇದ್ದೇವೆ. ಇವೆಲ್ಲವನ್ನು ಜನತೆ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಯಾವುದಾದರು ಹಿನ್ನಡೆ ಅಥವಾ ಸಮಸ್ಯೆ ಎದುರಾದ ತಕ್ಷಣ ಬೇರೆಯವನ್ನು ದೂರುವುದು ಸರಿಯಲ್ಲ. ನಾವೆಲ್ಲ ಮಧ್ಯಮ ವರ್ಗದವರಲ್ಲವೇ. ನಾವು ಹಾಲು ಕರೆಯುತ್ತೇವೆ,ರಾಗಿ ಬೆಳೆಯುತ್ತೇವೆಹೀಗಿದ್ದ ಮೇಲೆ ಏಕೆ ಭಯಪಡಬೇಕು.ನಮ್ಮ ಆದಾಯದ ಮೂಲವನ್ನು ತೋರಿಸಬೇಕಲ್ಲವೇ?. ತೆರಿಗೆ ವಂಚಕರು, ಕಳ್ಳರಿಗೆ ಹಾಗೂ ದೇಶದ್ರೋಹಿಗಳಿಗೆ ಆತಂಕ ಇರಬೇಕು. ಜಿಲ್ಲೆಯಲ್ಲಿ ರಾಜಕಾರಣ ಮಾಡುವವರು ಮತ್ತು ವಿರೋಧ ಪಕ್ಷದಲ್ಲಿ ಇರುವವರು ಪ್ರಾಮಾಣಿಕರಿರುವಾಗ ವಿಚಲಿತರಾಗುವ ಔಚಿತ್ಯವೇನು ಎಂದು ಲೇವಡಿ ಮಾಡಿದರು.