ಹಾಸನ :ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಯೋಜನೆಯನ್ನು ಪ್ರಧಾನಿ ಮೋದಿ ಅವರು ತಾವು ಜಾರಿಗೆ ತಂದಿರುವ ಯೋಜನೆ ಎಂದು ಹೇಳಿಕೊಳ್ಳುತ್ತಿರುವುದು ಹಾಸ್ಯಾಸ್ಪದ. ಯೋಗ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲು ಪ್ರಧಾನಿಯವರನ್ನು ಕರೆತರಲು 32 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಇದು ಯಾವ ಪುರುಷಾರ್ಥಕ್ಕೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸರ್ಕಾರದ ವಿರುದ್ಧ ಟೀಕಾಪ್ರಹಾರ ಮಾಡಿದರು.
ರಾಷ್ಟ್ರದ ಗೌರವಾನ್ವಿತ ಪ್ರಧಾನಿಯವರು ಮೈಸೂರಿಗೆ ಭೇಟಿ ನೀಡಿ, ವಿಶ್ವ ಯೋಗ ದಿನದ ಅಂಗವಾಗಿ ಮೈಸೂರಿನ ನಾಗರಿಕರ ಜೊತೆ ಯೋಗ ಆಯೋಜನೆಯಲ್ಲಿ ಭಾಗಿಯಾಗಿರುವುದಕ್ಕೆ ನಾನು ವೈಯಕ್ತಿಕವಾಗಿ ಅಭಿನಂದಿಸುತ್ತೇನೆ. ಆದರೆ ಬೆಂಗಳೂರಿನ ಕೊಮ್ಮಘಟ್ಟ ಸಭೆಯಲ್ಲಿ ಮಾತನಾಡಬೇಕಾದ್ರೆ ಯಾವ ಸರ್ಕಾರವೂ ಏನು ಮಾಡಿಲ್ಲ ಎಂದಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ನಾಡಿಗೆ ಕೊಡುಗೆ ಕೊಟ್ಟಿದ್ದನ್ನು ಸ್ಮರಿಸುವುದು ದೊಡ್ಡತನ ಎಂದರು.
ಉದ್ಧಟತನದ ಪರಮಾವಧಿ : ಬ್ರಿಟಿಷ್ ಅಧಿಕಾರದಲ್ಲಿ ದೇಶವನ್ನು ಒಡೆಯುವ ಕೆಲಸವಾಯಿತು. ಅವತ್ತು ಅನೇಕರು ಹೋರಾಟಕ್ಕೆ ಪ್ರಾಣ ಬಿಟ್ಟಿದ್ದಾರೆ. ಸ್ವಾತಂತ್ರ್ಯದ ಸಂದರ್ಭದ ದಿನದಿಂದ ಇಲ್ಲಿಯವರೆಗೆ ಹಲವಾರು ನಾಯಕರ ತೀರ್ಮಾನದಿಂದ ದೇಶ ಪ್ರಗತಿ ಕಂಡಿದೆ. ಹಲವಾರು ನಾಯಕರು ಹಲವಾರು ಕೊಡುಗೆ ಕೊಟ್ಟಿದ್ದಾರೆ. ಇಂದು ಮೋದಿ ಎಲ್ಲವೂ ತನ್ನಿಂದಲೇ ಆಗುತ್ತಿದೆ ಎನ್ನುತ್ತಿದ್ದಾರೆ. ಇದು ಉದ್ಧಟತನದ ಪರಮಾವಧಿ ಎಂದು ಹೆಚ್ಡಿಕೆ ಕಿಡಿಕಾರಿದರು.
ನೆಹರು ಅವತ್ತಿನ ಕೃಷಿ, ಕೈಗಾರಿಕೆಗೆ ಹಲವಾರು ಕೊಡುಗೆ ಕೊಟ್ಟಿದ್ದಾರೆ. ಮೊನ್ನೆ ಬೆಂಗಳೂರಿನಲ್ಲಿ 33 ಸಾವಿರ ಕೋಟಿ ಅನುದಾನದ ಕಾರ್ಯಕ್ರಮಕ್ಕೆ ಶಂಕುಸ್ಥಾಪನೆ ಮಾಡಿದ್ದೇವೆ ಎಂದು ಪ್ರಧಾನಿ ಭಾಷಣ ಮಾಡಿದ್ದಾರೆ. ಇದರಲ್ಲಿ ಕೇವಲ ಮೋದಿಯವರ ಕೊಡುಗೆ ಮಾತ್ರ ಇದೆಯಾ? ಹಿಂದೆ ಇದ್ದ ಸರ್ಕಾರಗಳು ಹಾಕಿದ್ದ ಬೇಸ್ಗೆ ಇಂದು ಶಂಕುಸ್ಥಾಪನೆ ಮಾಡಿದ್ದಾರೆ. ಸಬ್ ಅರ್ಬನ್ ರೈಲ್ವೆ ವಿಚಾರದ ಬಗ್ಗೆ 40 ವರ್ಷ ಸಾಧನೆ ಮಾಡಿದ್ದೇವೆ ಎನ್ನುತ್ತಿದ್ದಾರೆ.
ನಾನು ಮುಖ್ಯಮಂತ್ರಿ ಆಗಿದ್ದಾಗ ಅಂದು ರೈಲ್ವೆ ಸಚಿವರಾಗಿದ್ದ ಪಿಯೂಷ್ ಗೋಯಲ್ ಭೇಟಿ ಮಾಡಲಾಗಿದ್ದು, ಇದರ ನಿಜವಾದ ಚಿಂತಕರು ದೇವೇಗೌಡರು. ಅವರು ಪ್ರಧಾನಿ ಆಗಿದ್ದಾಗಲೇ ಈ ಯೋಜನೆ ಬಗ್ಗೆ ಕನಸು ಕಂಡಿದ್ದರು. ಅಷ್ಟರಲ್ಲಿ ಅವರ ಸರ್ಕಾರ ಹೋಯಿತು. ನನ್ನ ಸರ್ಕಾರದ ಅವಧಿಯಲ್ಲಿ ಇದಕ್ಕೆ ಮರು ಚಾಲನೆ ನೀಡಲಾಗಿತ್ತು. ನಾನು ಮುಖ್ಯಮಂತ್ರಿ ಆದಾಗ ಪಿಯೂಷ್ ಗೋಯಲ್, ಕೃಷ್ಣಾದಲ್ಲಿ ಈ ಬಗ್ಗೆ ನನ್ನ ಜೊತೆ ಸಭೆ ಕೂಡ ಮಾಡಿದ್ರು. ಅಂದು ಅವರು ನನಗೆ ಮುಂದಿನ ಬಜೆಟ್ನಲ್ಲಿ ಹಣ ಇಟ್ಟು ಮೋದಿ ಕರೆಸಿ ಉದ್ಘಾಟನೆ ಮಾಡುವ ಭರವಸೆ ನೀಡಿದ್ದರು. ಆದರೂ ಮೂರು ವರ್ಷ ನೆನೆಗುದಿಗೆ ಬಿದ್ದಿತ್ತು. ಇದೀಗ ಚಾಲನೆ ನೀಡಿದ್ದಾರೆ ಅಷ್ಟೇ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.