ಹಾಸನ :ನಗರದ ಹೃದಯ ಭಾಗದ ಚನ್ನಪಟ್ಟಣ ಕೆರೆಯನ್ನು ಡಿಸ್ನಿಲ್ಯಾಂಡ್ ಮಾದರಿ ಅಭಿವೃದ್ಧಿಪಡಿಸುವ ಯೋಜನೆ ತಿರಸ್ಕೃತಗೊಂಡು ತಿಪ್ಪೆಗುಂಡಿ ಸೇರಿದೆ ಎಂದು ಶಾಸಕ ಪ್ರೀತಂ ಜೆ.ಗೌಡ ವ್ಯಂಗ್ಯವಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಕೆರೆ ಅಭಿವೃದ್ಧಿಪಡಿಸುವ ಬದಲಿಗೆ ನಗರ ವ್ಯಾಪ್ತಿಯ 6 ಕೆರೆ ಮತ್ತು 9 ಉದ್ಯಾನಗಳ ಅಭಿವೃದ್ಧಿಗಾಗಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ₹144 ಕೋಟಿ ಅನುದಾನ ನೀಡಿದ್ದಾರೆ.
ಒಂದು ವೇಳೆ ಹೇಮಾವತಿ ನದಿ ನೀರು ಸರಬರಾಜು ನಿಂತರೆ, ಜನರು ಕುಡಿಯುವ ನೀರಿಗೆ ಕೊಳವೆ ಬಾವಿಗಳನ್ನೇ ಅವಲಂಬಿಸಬೇಕು. ಹಾಗಾಗಿ, ನಗರ ಸುತ್ತಮುತ್ತಲಿನ ಕೆರೆಗಳ ಪುನಶ್ಚೇತನ ಅಗತ್ಯವಾಗಿತ್ತು. ನಾಗರಿಕರ ಜೊತೆಗೆ ಚರ್ಚಿಸಿ 6 ಕೆರೆಗಳ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ಇದನ್ನೂ ಓದಿ...ಆಕಸ್ಮಿಕವಾಗಿ ಬಂದ ಕೂಸಿದು, ಅದರ ಮಾತಿಗೆ ಪ್ರತಿಕ್ರಿಯಿಸಲ್ಲ.. ಪ್ರೀತಂಗೌಡಗೆ ಹೆಚ್ ಡಿ ರೇವಣ್ಣ ಮಾತಿನ ತಿವಿತ
ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡಿದ್ದೇನೆ. ಕುಡಿಯಲು ನೀರೇ ಇಲ್ಲದಾಗ, ಮಕ್ಕಳ ರೈಲು ಏಕೆ ಬೇಕು? ಅವರಿಗೆ ಬೇಕಾದ ಕಾಮಗಾರಿ ಕೈಗೊಂಡು ಹಣ ಹೊಡೆಯುವುದೇ ಅವರ ಉದ್ದೇಶ. ಚನ್ನಪಟ್ಟಣ ಕೆರೆಯನ್ನು ಡಿಸ್ನಿಲ್ಯಾಂಡ್ ಮಾದರಿ ಅಭಿವೃದ್ಧಿಪಡಿಸುವುದು ಎಂದರೆ ಹೊಟ್ಟೆಗೆ ಹಿಟ್ಟಿಲ್ಲದೆ ಜುಟ್ಟಿಗೆ ಮಲ್ಲಿಗೆ ಹೂವು ಮುಡಿಸಿದಂತೆ ಎಂದು ಪರೋಕ್ಷವಾಗಿ ಶಾಸಕ ಹೆಚ್ ಡಿ ರೇವಣ್ಣ ಅವರ ವಿರುದ್ಧ ಹರಿಹಾಯ್ದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಪ್ರೀತಂ ಜೆ.ಗೌಡ ಒಬ್ಬರು ಪ್ರಧಾನಿಯಾಗಿ, ಇನ್ನೊಬ್ಬರು ಮುಖ್ಯಮಂತ್ರಿಯಾಗಿ, ಮತ್ತೊಬ್ಬರು ಸಚಿವರಾಗಿ ಅಧಿಕಾರ ನಡೆಸಿದ್ದಾರೆ. ಕೆರೆಗಳಿಗೆ ಕೊಳಚೆ ನೀರು ಸೇರ್ಪಡೆಯಾಗುತ್ತಿದ್ದು, ಅದರ ತಡೆಗೆ ಎಸ್ಟಿಪಿ ಘಟಕ ನಿರ್ಮಿಸಬೇಕೆಂಬ ಕನಿಷ್ಠ ಜ್ಞಾನ ಅವರಿಗಿಲ್ಲ.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ನಗರದ ಯುಜಿಡಿಗಾಗಿ ₹165 ಕೋಟಿ ಅನುದಾನ ನೀಡಿದ್ದಾರೆ. ಕೆರೆ ಮತ್ತು ಉದ್ಯಾನಗಳ ಅಭಿವೃದ್ಧಿ ಕುರಿತ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಸದ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದರು.
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಅಂದಾಜು 1,200ಕ್ಕೂ ಹೆಚ್ಚು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆ. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಕಾನೂನು ಪ್ರಕಾರವೇ ನಿಗದಿಯಾಗಲಿದೆ.
ಅವರ ಆಡಳಿತದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗೌಪ್ಯಸಭೆ ನಡೆಸಿ ಮೀಸಲಾತಿ ಮಾಡುತ್ತಿದ್ದರಲ್ಲ. ಹಾಗೆಯೇ ನಾವು ಮಾಡುತ್ತಿದ್ದೇವೆ ಎಂದುಕೊಂಡಿದ್ದಾರೆ. ಯಾರ ಹಸ್ತಕ್ಷೇಪವೂ ಇರುವುದಿಲ್ಲ. ಕಾನೂನಿನ ಪ್ರಕಾರವೇ ನಡೆಯಲಿದೆ ಎಂದರು.