ಹಾಸನ:ಜಿಲ್ಲೆಯ ಹಾಸನ ವಿಧಾನಸಭ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿಲ್ಲ. ಯಾಕೆಂದರೆ ಸದ್ಯ ಬಿಜೆಪಿಯ ಪ್ರೀತಂ ಗೌಡ ಶಾಸಕರಾಗಿದ್ದಾರೆ. ಆದ್ರೆ ಮಾಜಿ ಶಾಸಕರ ಪುತ್ರರೊಬ್ಬರು ತಾನೇ ಹಾಸನದ ಮುಂದಿನ ಶಾಸಕ ಎಂದು ಹೇಳಿಕೊಳ್ಳುತ್ತಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಜೆಡಿಎಸ್ ಶಾಸಕರೇ ಆಯ್ಕೆಯಾಗಿದ್ದರೆ, ಹಾಸನ ಕ್ಷೇತ್ರ ಮಾತ್ರ ಬಿಜೆಪಿ ಪಾಲಾಗಿತ್ತು. 4 ಬಾರಿ ಶಾಸಕರಾಗಿದ್ದ ದಿ. ಹೆಚ್.ಎಸ್. ಪ್ರಕಾಶ್ ಅವರನ್ನ ಆಗಷ್ಟೇ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದ ಪ್ರೀತಂಗೌಡ ಮಣಿಸಿದ್ದರು. ಈ ನಡುವೆ ಅನಾರೋಗ್ಯದಿಂದ ಬಳಲುತ್ತಿದ್ದ ಹೆಚ್.ಎಸ್. ಪ್ರಕಾಶ್, ಈ ಸೋಲಿನ ಬಳಿಕ ಆರೋಗ್ಯ ಮತ್ತಷ್ಟು ಹದಗೆಟ್ಟು ಕೊನೆಯುಸಿರೆಳೆದರು. ಆದರೀಗ ಅವರ ಮಗ ಸ್ವರೂಪ್ ರಾಜಕೀಯವಾಗಿ ಮಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಫೇಸ್ಬುಕ್ನಲ್ಲಿ ನಾನೇ ಹಾಸನದ ಮುಂದಿನ ಶಾಸಕ ಎಂದು ಖಾತೆ ಹೊಂದಿರುವ ಸ್ವರೂಪ್ ಸದ್ಯ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಕೊರತೆ ಎದ್ದುಕಾಣುತ್ತಿದೆ. ಒಂದು ವೇಳೆ ಮಧ್ಯಂತರ ಚುನಾವಣೆ ನಡೆದರೆ ಹಾಸನದಿಂದ ಸ್ಪರ್ಧಿಸಲು ಜೆಡಿಎಸ್ನಿಂದ ಪ್ರಮುಖ ಅಭ್ಯರ್ಥಿಯೇ ಇಲ್ಲದಂತಾಗಿದೆ. ಈ ಪರಿಸ್ಥಿತಿಯ ಲಾಭ ಪಡೆಯಲು ಯುವ ರಾಜಕಾರಣಿ ಸ್ವರೂಪ್ ಮುಂದಾಗಿದ್ದಾರೆ. ಕೂಸು ಹುಟ್ಟುವುದಕ್ಕೂ ಮುನ್ನವೇ ಕುಲಾಯಿ ಹೊಲೆಸಿದ್ರು ಎನ್ನುವಂತೆ ತಾನೇ ಹಾಸನದ ಮುಂದಿನ ಶಾಸಕ ಅಂತಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಲೋಕಸಭಾ ಚುನಾವಣೆ ವೇಳೆ ಪ್ರಜ್ವಲ್ ರೇವಣ್ಣ ಜೊತೆ ಓಡಾಡಿಕೊಂಡು ಅವರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿರುವ ಸ್ವರೂಪ್ ಅವರು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಗಾದಿಯನ್ನೂ ಗಿಟ್ಟಿಸಿಕೊಂಡಿದ್ದಾರೆ. ಈ ನಡುವೆ ಶಾಸಕ ಸ್ಥಾನದ ಮೇಲೆ ಕಣ್ಣಿಟ್ಟಿರುವ ಸ್ವರೂಪ್, ತಮ್ಮ ಫೇಸ್‌ಬುಕ್ ಖಾತೆಯನ್ನ 'ಹಾಸನದ ಮುಂದಿನ ಶಾಸಕ ಸ್ವರೂಪ್' ಅಂತಾ ಬದಲಾಯಿಸಿಕೊಂಡಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಕ್ರಿಯಾಶೀಲರಾಗಿರೋ ಅವರು ಒಂದಿಲ್ಲೊಂದು ಫೋಟೋ, ಶುಭಾಶಯಗಳನ್ನ ಹಂಚಿಕೊಳ್ಳುತ್ತಿದ್ದಾರೆ.
ಒಟ್ಟಾರೆ ಯಾವುದೇ ಮಧ್ಯಂತರ ಚುನಾವಣೆ ಘೋಷಣೆಯಾಗದೇ ಇದ್ದರೂ, ಜೆಡಿಎಸ್ ಅಥವಾ ಇತರೇ ಪಕ್ಷಗಳಿಂದ ಮುಂದೆ ನಡೆಯಬಹುದಾದ ಚುನಾವಣೆಯಲ್ಲಿ ಟಿಕೆಟ್ ಸಿಗುವ ಖಚಿತತೆ ಇಲ್ಲದಿದ್ದರೂ ಕೂಡ ಹೀಗೆ ಫೇಸ್ಬುಕ್ನಲ್ಲಿ 'ಹಾಸನದ ಮುಂದಿನ ಶಾಸಕ ಸ್ವರೂಪ್' ಎಂದು ಬರೆದುಕೊಂಡಿರುವುದು ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.