ಆಲೂರು: ಚಿಕ್ಕೆರೆ ಕಾಲುವೆ ಪುನರ್ ನಿರ್ಮಾಣ ಕುರಿತು ಸ್ಥಳ ಪರಿಶೀಲನೆಗೆ ಆಗಮಿಸಿದ್ದ ಅಧಿಕಾರಿಗಳನ್ನು ರೈತರು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೇ ತಮಗೆ ನ್ಯಾಯ ಸಿಗದಿದ್ದರೆ ವಿಷ ಕುಡಿಯುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಈ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ತಾಳೂರು ಗ್ರಾಮ ಪಂಚಾಯಿತಿಗೆ ಸೇರಿದ ಚಿಕ್ಕಕಣಗಾಲು ಗ್ರಾಮದಲ್ಲಿ ನಡೆದಿದೆ.
ಏನಿದು ಪ್ರಕರಣ?
ವಾಟೆಹೊಳೆ ಜಲಾಶಯ ವ್ಯಾಪ್ತಿಯ 9 ಗ್ರಾಮಗಳ ಕೆರೆಗಳ ನೀರು ಚಿಕ್ಕೆರೆ ಕೆರೆಗೆ ಬಂದು ಸೇರುತ್ತದೆ. ನಂತರ ಈ ಕೆರೆಯ ನೀರು ಕೆಳಭಾಗದಿಂದ ಜನ್ನಾಪುರ, ತಿಮ್ಮನಹಳ್ಳಿ ಗ್ರಾಮಗಳ ರೈತರ ಜಮೀನುಗಳ ಕಾಲುವೆ ಮೂಲಕ ಹರಿಯುತ್ತದೆ. ಹರಿದು ಕೊನೆಗೆ ಯಗಚಿ ನದಿ ಸೇರುತ್ತದೆ. ಕಳೆದು ಎರಡು ದಶಕಗಳಿಂದ ಇದೇ ಕಾಲುವೆ ನೀರನ್ನು ಬಳಸಿಕೊಂಡು ರೈತರು ಬೆಳೆ ಬೆಳೆಯುತ್ತಿದ್ದಾರೆ.
ಸಾಲಶೂಲ ಮಾಡಿ ಅಡಕೆ ತೋಟ ಸೇರಿದಂತೆ ವಿವಿಧ ಬೆಳೆಯನ್ನು ಬೆಳೆದಿದ್ದಾರೆ. ಫಸಲು ಬರುವ ಸಮಯದಲ್ಲೀಗ ಹರಿಯುವ ನೀರಿನ ಪಥ ಬದಲಾವಣೆ ಮಾಡುತ್ತಿರುವುದರಿಂದ ಬೆಳೆಗಳು ಒಣಗಲು ಕಾರಣವಾಗುತ್ತಿದೆ. ಹೀಗಾಗಿ ಇಂದು ಸಮೀಕ್ಷೆ ಮಾಡಲು ಬಂದ ಅಧಿಕಾರಿಗಳಿಗೆ ರೈತರು ತಡೆದು, ತರಾಟೆಗೆ ತೆಗೆದುಕೊಂಡು ತಮ್ಮ ಆಕ್ರೋಶ ಹೊರಹಾಕಿದರು.
ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಹಾಸನ ರೈತರು ಪಥ ಬದಲಾವಣೆ ಮಾಡಿದ್ರೆ ವಿಷ ಸೇವಿಸುತ್ತೇವೆ :
ಒಂದೂವರೆ ದಶಕಗಳಿಂದ ವಾಟೆಹೊಳೆ ನೀರನ್ನು ಬಳಸಿಕೊಂಡು ಬದುಕುತ್ತಿದ್ದೇವೆ. ಇದ್ದಕ್ಕಿದ್ದಾಗೆ ನೀರಿನ ಕಾಲುವೆ ಬೇರೆಯಾದರೆ ಯಾವುದೇ ಬೆಳೆಗಳು ಬದುಕುಳಿಯುವುದಿಲ್ಲ. ಅಧಿಕಾರಿಗಳು ರೈತರ ಸಮಸ್ಯೆಗೆ ಪರಿಹಾರ ಒದಗಿಸಿಕೊಡಬೇಕು. ಇಲ್ಲವಾದರೆ ಸಾಮೂಹಿಕವಾಗಿ ಈ ಭಾಗದ ರೈತರು ವಿಷಸೇವಿಸಿ ಜೀವ ಕಳೆದುಕೊಳ್ಳುವುದಾಗಿ ಅಧಿಕಾರಿಗಳ ಎದುರು ಕಣ್ಣೀರು ಸುರಿಸಿದರು.
ರೈತರಿಗೆ ಅನ್ಯಾಯ:
ಕಾಲುವೆಯನ್ನು ಮೂಲ ಸ್ಥಳದಿಂದ ಬೇರೆ ಜಾಗದಲ್ಲಿ ನಿರ್ಮಿಸಲು ಮುಂದಾಗಿರುವುದು ರೈತರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಇದರಿಂದ ಜಲಾಶಯವನ್ನೇ ನಂಬಿಕೊಂಡಿರುವ ರೈತರು ಬೀದಿಗೆ ಬೀಳುವ ಸಾಧ್ಯತೆಯಿದ್ದು, ಮೊದಲಿದ್ದ ಯೋಜನೆಯಂತೆಯೇ ನೀರು ಹರಿಸಬೇಕೆಂದು ಆಗ್ರಹಿಸಿದರು.
ಕಳೆದ 20 ವರ್ಷಗಳಿಂದ ಹರಿಯುತ್ತಿರುವ ಈ ಕೆರೆ ನೀರು ಇದೇ ಕಾಲುವೆಯಲ್ಲಿಯೇ ಹರಿದು ನದಿ ಸೇರಿರುತ್ತದೆ. ಹೀಗಾಗಿ ಕಿರು ನಾಲೆ ನಿರ್ಮಿಸುವ ಮೂಲಕ ಈ ಭಾಗದ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಅಧಿಕಾರಿಗಳನ್ನು ರೈತರು ಒತ್ತಾಯಿಸಿದ್ರು.
ಸರ್ಕಾರದ ನಿರ್ದೇಶನದಂತೆ ಕರಾಬು ಜಾಗದಲ್ಲಿ ಮಾತ್ರ ಕಾಲುವೆ ನಿರ್ಮಿಸಬೇಕು. ಆದರೆ, ಅಲ್ಲಿ ಕೆರೆ ನೀರು ಕರಾಬು ಜಾಗದಲ್ಲಿ ಹರಿಯುತ್ತಿಲ್ಲ. ಬದಲಾಗಿ ರೈತರ ಜಮೀನಿನ ಪಕ್ಕ ನೈಸರ್ಗಿಕವಾಗಿ ಹರಿಯುತ್ತಿದೆ. ಇಲ್ಲಿ ಕಾಲುವೆ ನಿರ್ಮಾಣವಾಗಬೇಕಾದರೆ ಅಕ್ಕ - ಪಕ್ಕದ ಜಮೀನಗಳ ರೈತರು ಒಪ್ಪಿಗೆ ಸೂಚಿಸಬೇಕು.
ಆದರೆ, ಇದಕ್ಕೆ ಕೆಲ ರೈತರು ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ನೀರು ಹರಿಯುತ್ತಿರುವ ಜಾಗದಲ್ಲಿಯೇ ಕಾಲುವೆ ಸ್ಥಾಪಿಸುವಂತೆ ಇಂದು ರೈತರು ಒತ್ತಾಯಿಸುತ್ತಿದ್ದು, ಈ ಬಗ್ಗೆ ನಮ್ಮ ಇಲಾಖೆಯ ಉನ್ನತಾಧಿಕಾರಿಗಳಿಗೆ ತಿಳಿಸಲಾಗುವುದು ಎಂದು ವಾಟೆಹೊಳೆ ಇಲಾಖೆಯ ಸಹಾಯಕ ಇಂಜಿನಿಯರ್ ಸುಂದರ್‌ರಾಜು ತಿಳಿಸಿದರು.
ಇದನ್ನೂ ಓದಿ:ತಿರುವಿನಲ್ಲಿ ಲಾರಿ ಪಲ್ಟಿ.. ಬೆಂಗಳೂರು - ದಿಂಡಿಗಲ್ ರಸ್ತೆಯಲ್ಲಿ 5 ತಾಸು ನಿಂತಲ್ಲೇ ನಿಂತ ವಾಹನಗಳು..!
ಈಗಾಗಲೇ ಸಂಕಷ್ಟಗಳನ್ನು ಎದುರಿಸಿರುವ ರೈತರ ಸಮಸ್ಯೆ ಸುಧಾರಿಸುತ್ತಿದೆ ಎನ್ನುವಷ್ಟರಲ್ಲಿ, ನೈಸರ್ಗಿಕವಾಗಿ ಹರಿಯುತ್ತಿದ್ದ ನೀರಿನ ಪಥವನ್ನು ಬದಲಾವಣೆ ಮಾಡ್ತಿರೋದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ರೈತರು ಅಳಲು ತೋಡಿಕೊಂಡರು.