ಹಾಸನ:ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ನೀಡುವಂತೆ ಒತ್ತಾಯಿಸಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್ಎಸ್ಯುಐ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಆರ್.ಗಿರೀಶ್ ಅವರಿಗೆ ಮನವಿ ಸಲ್ಲಿಸಿದರು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆ ಎನ್.ಆರ್.ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿತು.
ಉಚಿತ ಲ್ಯಾಪ್ಟಾಪ್ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸರ್ಕಾರಿ ಕಲಾ ಕಾಲೇಜಿನ 2019-20ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ನೀಡುತ್ತಿರುವುದನ್ನು ಸ್ವಾಗತಿಸುತ್ತೇವೆ. ಆದರೆ, ದ್ವಿತೀಯ ಮತ್ತು ಅಂತಿಮ ವರ್ಷದ ಬಿಎ, ಬಿಕಾಂ, ಬಿಎಸ್ಸಿ, ಬಿಸಿಎ, ಬಿಬಿಎಂ ವಿದ್ಯಾರ್ಥಿಗಳಿಗೆ ಈ ಯೋಜನೆಯ ಫಲ ಸಿಗದಿರುವುದು ವಿಷಾದನೀಯ ಎಂದು ಪ್ರತಿಭಟನಾಕಾರರು ಬೇಸರ ವ್ಯಕ್ತಪಡಿಸಿದರು.
ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮ ಪದವಿ ಮುಗಿಸಿಕೊಂಡು ಎರಡು-ಮೂರು ತಿಂಗಳಲ್ಲಿ ಉನ್ನತ ಶಿಕ್ಷಣಕ್ಕೆ ಹೋಗುತ್ತಾರೆ. ಅವರಿಗೆ ಲ್ಯಾಪ್ಟಾಪ್ ನೀಡಿದರೆ ಮುಂದಿನ ವ್ಯಾಸಂಗಕ್ಕೆ ಅನುಕೂಲವಾಗುತ್ತದೆ. ಯಾವೊಬ್ಬ ವಿದ್ಯಾರ್ಥಿಗೂ ತಾರತಮ್ಯ ಮಾಡಬಾರದು ಎಂದು ಮನವಿ ಮಾಡಿದರು.