ಹಾಸನ: ಭೂಮಿ ಮೇಲೆ ಜನ್ಮತಾಳಿದ ನಾವು ಜೀವನದ ಅರ್ಥ ತಿಳಿದುಕೊಳ್ಳದೇ ಬದುಕು ಸಾರ್ಥಕವಾಗುವುದಿಲ್ಲ ಎಂದು ಗಾಂಧಿ ಕಥನ ಬೃಹತ್ ಗ್ರಂಥ ರಚನೆಕಾರ ಡಿ.ಎಸ್. ನಾಗಭೂಷಣ್ ಅಭಿಪ್ರಾಯಪಟ್ಟರು.
ಯುವ ಪೀಳಿಗೆಗೆ ಗಾಂಧೀಜಿ ವಿಚಾರಧಾರೆ ಅವಶ್ಯಕ: ಡಿ.ಎಸ್. ನಾಗಭೂಷಣ್ ಅಭಿಪ್ರಾಯ
ಹಾಸನದಲ್ಲಿ ಇಂದು ಡಿ.ಎಸ್. ನಾಗಭೂಷಣ್ ರಚಿತ "ಗಾಂಧಿ ಕಥನ" ಕೃತಿ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪುಸ್ತಕ ಅನಾವರಣಗೊಳಿಸಿ, ಗಾಧೀಜಿಯವರ ವಿಚಾರಧಾರೆಗಳನ್ನು ತಿಳಿಸಲಾಯಿತು.
ನಗರದ ರೆಡ್ಕ್ರಾಸ್ ಭವನದಲ್ಲಿ ಜನತಾಮಾಧ್ಯಮ ಬಳಗ, ಜಿಲ್ಲಾ ರೆಡ್ಕ್ರಾಸ್ ಸಂಸ್ಥೆ, ಹಸಿರುಭೂಮಿ ಪ್ರತಿಷ್ಠಾನ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ "ಗಾಂಧಿ ಕಥನ" ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇವರು ಎಂದರೆ ಸತ್ಯ, ಇದನ್ನೇ ಗಾಂಧೀಜಿಯವರು ಸತ್ಯವೇ ದೇವರು ಎಂದಿದ್ದರು. ಗಾಂಧೀಜಿಯವರ ವಿಚಾರಗಳು ನಾವು ಮಾಡುತ್ತಿರುವ ಜೀವನಗಳ ತದ್ವಿರುದ್ಧವಾಗಿದ್ದು, ಗಾಂಧೀಜಿಯೇ ನಿಜವಾದ ಮಣ್ಣಿನ ಮಗ ಎಂದು ಕರೆದರು. ಇಂದು ಗಾಂಧಿ ಚರಿತ್ರೆ ದಮನವಾಗುತ್ತಿದೆ. ರಾಜಕೀಯ ಉದ್ದೇಶಗಳಿಂದ ಸಮಾಜದಲ್ಲಿ ಗಾಂಧಿಯನ್ನು ಮರೆಸುವ ಪ್ರಯತ್ನ ನಡೆಯುತ್ತಿದೆ. ಆ ಸಲುವಾಗಿ ಪುಸ್ತಕ ರಚಿಸಲಾಗಿದೆ ಎಂದು ಪುಸ್ತಕ ರಚನೆ ಮಾಡಿರುವ ಉದ್ದೇಶವನ್ನು ತಿಳಿಸಿದರು.
ಇಂದಿನ ಯುವ ಪೀಳಿಗೆಗೆ ಗಾಂಧೀಜಿ ವಿಚಾರಧಾರೆ ಅವಶ್ಯಕವಾಗಿದೆ. ಗಾಂಧಿ ಕುರಿತು ಸಮಗ್ರವಾಗಿ, ಯುವ ಪೀಳಿಗೆಗೆ ಅರ್ಥವಾಗುವ ರೀತಿ ಪುಸ್ತಕದಲ್ಲಿ ಬರೆಯಲಾಗಿದೆ. ಮಕ್ಕಳಿಗೆ ಜೀವನ ಮೌಲ್ಯಗಳ ಬಗ್ಗೆ ಪುಸ್ತಕ ತಿಳಿಸುತ್ತದೆ. ಪೋಷಕರು ಮಕ್ಕಳಿಗೆ ಇಲ್ಲಿನ ಸಂಸ್ಕೃತಿ ಬಗ್ಗೆ ಹಾಗೂ ಗುರು-ಹಿರಿಯರಿಗೆ ಗೌರವ ಕೊಡುವ ಬಗ್ಗೆ ಕಲಿಸಬೇಕು ಎಂದು ಲೇಖಕ ನಾಗಭೂಷಣ್ ಹೇಳಿದರು.