ಅರಕಲಗೂಡು (ಹಾಸನ):ಶರವೇಗದಲ್ಲಿ ಹಬ್ಬುತ್ತಿರುವ ಮಹಾಮಾರಿ ಕರೊನಾ ಸೋಂಕು ತಡೆಗೆ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು, ಮುಖ್ಯವಾಗಿ ಕರೊನಾ ವಾರಿಯರ್ಗಳು ಮತ್ತಷ್ಟು ಜಾಗೃತರಾಗಬೇಕು ಎಂದು ಮಾಜಿ ಸಚಿವ ಎ. ಮಂಜು ಮನವಿ ಮಾಡಿದರು.
ತಾಲೂಕಿನ ಬರಗೂರಿನಲ್ಲಿ ಎ. ಮಂಜು ಅಭಿಮಾನಿ ಬಳಗದ ವತಿಯಿಂದ ದೊಡ್ಡಮಗ್ಗೆ ಹೋಬಳಿ ಕರೊನಾ ವಾರಿಯರ್ಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಮಹಾಮಾರಿ ಕರೊನಾ ಸೋಂಕು ಇದೀಗ ಅಮಾಯಕರ ಬದುಕನ್ನು ಕತ್ತಲೆಯ ಕೂಪಕ್ಕೆ ದೂಡುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಹಾಗಾಗಿ ಕರೊನಾ ವಾರಿಯರ್ಗಳು ಹೆಚ್ಚು ಜಾಗೃತರಾಗಿ ಸಮುದಾಯಕ್ಕೆ ಸೋಂಕು ತಗುಲದಂತೆ ನಿಗಾ ವಹಿಸಿ ಕರ್ತವ್ಯ ನಿರ್ವಹಿಸುವುದು ಅತ್ಯವಶ್ಯಕ ಎಂದರು.
ಎಲ್ಲಕ್ಕಿಂತ ಮುಖ್ಯವಾಗಿ ಮದ್ದಿಲ್ಲದ ಕರೊನಾ ಕಾಯಿಲೆಗೆ ಸಾರ್ವಜನಿಕರೇ ಸ್ವಯಂಪ್ರೇರಿತರಾಗಿ ಪರಸ್ಪರ ಅಂತರ ಕಾಪಾಡಿಕೊಂಡು ಪರಿಹಾರ ಮಾರ್ಗಗಳನ್ನು ಪಾಲಿಸಬೇಕು ಎಂದು ವಿನಂತಿಸಿದರು.