ಹಾಸನ: ಉಗ್ರರ ದಾಳಿ ಭೀತಿ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಕಟ್ಟೆಚ್ಚರ ವಹಿಸಿದ್ದರೂ ಮುನ್ನೆಚ್ಚರಿಕೆಯಾಗಿ ಬಿಗಿ ಭದ್ರತೆ ಒದಗಿಸುವುದು ಅತ್ಯಗತ್ಯವಾಗಿದೆ.
ಉಗ್ರರ ದಾಳಿಯ ಎಚ್ಚರಿಕೆ ಸಂದೇಶ, ತೆಗೆದುಕೊಳ್ಳಬೇಕಾದ ಕ್ರಮದ ಸೂಚನೆ ಹೊರಬಿದ್ದ ಕೂಡಲೇ ಜಾಗೃತವಾದ ಜಿಲ್ಲಾ ಪೊಲೀಸರು, ಹೇಮಾವತಿ ಜಲಾಶಯ, ರೈಲು ಹಾಗೂ ಬಸ್ ನಿಲ್ದಾಣ ಹೀಗೆ ಅಗತ್ಯ ಪ್ರದೇಶಕ್ಕೆ ಭದ್ರತೆ ನೀಡಲು ಶ್ವಾನದಳದಿಂದ ಪರಿಶೀಲನೆ ನಡೆಸಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.
ಜಲಾಶಯ, ನಿಲ್ದಾಣಗಳಲ್ಲಿ ಶ್ವಾನದಳದಿಂದ ಪರಿಶೀಲನೆ ಹೇಮಾವತಿ ಜಲಾಶಯದ ಪ್ರವೇಶದ್ವಾರ ಹಾಗೂ ಜಲಾಶಯದ ಮೇಲ್ಬಾಗಕ್ಕೆ ಹೋಗುವ ಮಾರ್ಗದಲ್ಲಿ ಬೆರಳೆಣಿಕೆಯಷ್ಟು ಪೊಲೀಸರ ಭದ್ರತೆ ಒದಗಿಸಲಾಗಿದೆ. ಹಿನ್ನೀರು ಪ್ರದೇಶದಲ್ಲಿ ಯಾವುದೇ ಭದ್ರತೆ ಇಲ್ಲದ ಕಾರಣ ಯಾಂತ್ರೀಕೃತ ಬೋಟ್, ತೆಪ್ಪದ ಮೂಲಕವೋ ಬಂದು ಉಗ್ರರು ದಾಳಿ ನಡೆಸುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಆದ ಕಾರಣ ಹೆಚ್ಚಿನ ಭದ್ರತೆ ನೀಡುವ ಅಗತ್ಯವಿದೆ.
ಹಾಸನ ನಗರ ಬಸ್ ನಿಲ್ದಾಣ ಏಷ್ಯದಲ್ಲೇ ದೊಡ್ಡ ಬಸ್ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರೂ ಸಿಸಿಟಿವಿ ಕ್ಯಾಮರಾ ಹೊರತುಪಡಿಸಿದರೆ ಸಂಶಯಾಸ್ಪದ ವಸ್ತು ಪರಿಶೀಲಿಸಲು ಮೆಟಲ್ ಡಿಟೆಕ್ಟರ್ ಇಲ್ಲ. ಇನ್ನು ಜಿಲ್ಲಾ ರೈಲು ನಿಲ್ದಾಣದಲ್ಲೂ ಬೆರಳೆಣಿಕೆಯಷ್ಟು ರೈಲ್ವೆ ಪೊಲೀಸ್ ಇದ್ದು, ಸಾವಿರಾರು ಜನ ಪ್ರಯಾಣಿಕರು ಬಂದು ಹೋಗುವುದರಿಂದ ಮತ್ತಷ್ಟು ಭದ್ರತೆ ಅಗತ್ಯವಿದೆ.