ಹಾಸನ: ನಗರಸಭೆಯ 34ನೇ ವಾರ್ಡ್ಗೆ ಸುಳ್ಳು ಜಾತಿ ಹೇಳಿ ಸದಸ್ಯರಾಗಿ ಆಯ್ಕೆಗೊಂಡಿರುವ ಆರ್. ಮೋಹನ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಹಾಗೂ ಸದಸ್ಯತ್ವ ರದ್ದು ಮಾಡುವಂತೆ ಒತ್ತಾಯಿಸಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ ನೇತೃತ್ವದಲ್ಲಿ ನಗರಸಭೆಯ ಜೆಡಿಎಸ್ ಬೆಂಬಲಿತ ಸದಸ್ಯರುಗಳು ಜಿಲ್ಲಾ ಉಪವಿಭಾಗಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಹಾಸನ ನಗರಸಭೆ ಚುನಾವಣೆಯಲ್ಲಿ 34ನೇ ವಾರ್ಡ್ನಿಂದ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಆರ್. ಮೋಹನ್ ಸ್ಪರ್ಧಿಸಿ ವಿಜೇತರಾಗಿದ್ದಾರೆ. ಮೋಹನ್ರವರ ದಾಖಲಾತಿ ಪರಿಶೀಲಿಸಿದಾಗ ಇವರ ತಂದೆ ರಘುಪತಿ ರಾವ್. ಎಸ್ ಎಂದಿದೆ. ಇವರು ಮೂಲತಃ ಮರಾಠ ಸಮುದಾಯಕ್ಕೆ ಸೇರಿದವರು. 3(ಬಿ) ವರ್ಗದ ಅಡಿಯಲ್ಲಿ ಬರಲಿದ್ದು, ರಘುಪತಿ ರಾವ್ರವರ ಶಿಕ್ಷಣ ಅವಧಿಯಲ್ಲಿ ಎಲ್ಲ ದಾಖಲಾತಿಗಳಲ್ಲಿ ಜಾತಿ ಮರಾಠ ಎಂದು ನಮೂದಿಸಲ್ಪಟ್ಟಿದೆ. ಆದರೆ ಇವರ ಮಗ ಮೋಹನ್ ವಿದ್ಯಾಭ್ಯಾಸದಲ್ಲೂ ಕೂಡ ಮರಾಠ ಜಾತಿ ಬರೆದಿರುವುದನ್ನು ತಿದ್ದಿ ಗೊಂಡ (ಎಸ್.ಟಿ.) ಎಂದು ಬರೆಯಲಾಗಿದೆ ಎಂದರು.