ಆಲೂರು (ಹಾಸನ):ಆಲೂರಿನ ಕೆಂಚಮ್ಮನ ಹೊಸಕೋಟೆ ಹೋಬಳಿ ವ್ಯಾಪ್ತಿಯ ಕಾಗನೂರು ವ್ಯಾಪ್ತಿಯಲ್ಲಿ ಇಂದು ಕಾಣಿಸಿಕೊಂಡ ಕಾಡಾನೆಗಳ ಹಿಂಡಿನಿಂದ ಕಾಗನೂರು, ಮಲಗಳಲೆ, ಆನಗಳಲೆ, ಕಟ್ಟೆಹೊಳೆ, ಹೊಂಕರವಳ್ಳಿ ಭಾಗದ ಗ್ರಾಮಸ್ಥರು ಭಯದ ವಾತಾವರಣದಲ್ಲಿ ದಿನದೂಡುವಂತಾಗಿದೆ.
ಇಂದು ಏಕಾಏಕಿ ಮರಿಯಾನೆಗಳೊಂದಿಗೆ ಕಾಣಿಸಿಕೊಂಡು, ಗ್ರಾಮದ ರಸ್ತೆಯ ಮಧ್ಯೆಯೇ ಕಾಡಾನೆಗಳ ಹಿಂಡು ಬಂದಿದ್ದರಿಂದ ಕೂದಲೆಳೆಯಲ್ಲಿ ಜನರು ಜೀವ ಉಳಿಸಿಕೊಂಡಿದ್ದಾರೆ. ರೈತರು ಬೆಳೆದಿದ್ದ ಲಕ್ಷಾಂತರ ರೂ. ಬೆಲೆ ಬಾಳುವ ಶುಂಠಿ, ಕಾಫಿ ತೋಟ, ಬಾಳೆಗಿಡಗಳು ಸಂಪೂರ್ಣ ನಾಶವಾಗಿವೆ.
ಹಿಂಡಾನೆಗಳನ್ನು ಕಂಡು ಕಾಫಿ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ಭಯಗೊಂಡು ಕೆಲಸಕ್ಕೆ ಹೋಗಲು ಹಿಂದು-ಮುಂದು ನೋಡ್ತಿದ್ದಾರೆ.
ಊರೊಳಗೆ ಕಾಣಿಸಿಕೊಂಡ ಕಾಡಾನೆಗಳ ಹಿಂಡು ಕಾಡಾನೆಗಳ ಹಾವಳಿಯಿಂದ ಯಾವುದೇ ಬೆಳೆ ಬೆಳೆಯಲು ಕಷ್ಟವಾಗಿದೆ. ಹಿಂಡುಗಟ್ಟಲೆ ಆನೆಗಳಿರುವುದರಿಂದ ಅವುಗಳು ತಿರುಗಾಡುವ ಹಾದಿಯಲ್ಲಿ ಸಿಗುವ ಎಲ್ಲ ಬೆಳೆ ಸಂಪೂರ್ಣ ನಾಶವಾಗುತ್ತಿದೆ. ಆನೆಗಳನ್ನು ಓಡಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಎಷ್ಟೇ ಸಾಹಸ ಮಾಡಿದರೂ ಅವುಗಳು ಅತ್ತಿಂದಿತ್ತ ಓಡಾಡುವುದರಿಂದ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ ಅನ್ನೋದು ಗ್ರಾಮಸ್ಥರ ದೂರು.
ಕಾಡಾನೆಗಳು ಸಕಲೇಶಪುರ ತಾಲೂಕಿನಿಂದ ಈಗ ಆಲೂರು ತಾಲೂಕಿಗೆ ಬರುತ್ತಿದ್ದು, ಮಳೆಗಾಲ ಪ್ರಾರಂಭವಾಗುತ್ತಿರುವುದಿಂದ ಈಗ ಗದ್ದೆ ಕೆಲಸ ಪ್ರಾರಂಭವಾಗುತ್ತಿದೆ. ಕಾಡಾನೆಗಳನ್ನು ಓಡಿಸಲು ತೀವ್ರತರ ಕ್ರಮಗಳನ್ನು ಕೈಗೊಂಡರೆ ಆನೆ ಅಥವಾ ಮಾನವ ಪ್ರಾಣಕ್ಕೆ ಕುತ್ತಾದೀತು ಎಂಬ ಭಯ ಮತ್ತು ಎದುರಾಗುವ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮೂಲಕ ಎಚ್ಚರ ವಹಿಸಲಾಗಿದೆ.