ಅರಕಲಗೂಡು: ಡ್ರಗ್ಸ್ ಮಾಫಿಯಾ ಎಂಬುದು ಒಂದು ಆಘಾತಕಾರಿ ವಿಷಯ. ಅದರ ಮೂಲ ಬೇರುಗಳನ್ನು ಕಿತ್ತು ಹಾಕದೇ ಕೇವಲ ತೋರಿಕೆಯ ಕ್ರಮಗಳಿಂದ ಯಾವುದೇ ಪ್ರಯೋಜನವಾಗದು ಎಂದು ಶಾಸಕ ಎ.ಟಿ. ರಾಮಸ್ವಾಮಿ ಹೇಳಿದರು.
ಡ್ರಗ್ಸ್ ಮಾಫಿಯಾ ಬೇರುಗಳನ್ನು ಕೀಳದಿದ್ದರೆ ಸಮಾಜದ ಭವಿಷ್ಯಕ್ಕೆ ಪೆಟ್ಟು: ಶಾಸಕ ರಾಮಸ್ವಾಮಿ
ಡ್ರಗ್ಸ್ ಮಾಫಿಯಾದ ಬೇರುಗಳನ್ನು ಕೀಳದಿದ್ದರೆ ಸಮಾಜದ ಭವಿಷ್ಯಕ್ಕೆ ಪೆಟ್ಟು ಎಂದು ಶಾಸಕ ಎ. ಟಿ. ರಾಮಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದಿನ ಪೀಳಿಗೆ ನಮ್ಮ ಯುವಕರು. ಅವರು ನಾಶವಾದರೆ ದೇಶವನ್ನು ಸರಿಪಡಿಸಲು ಸಾಧ್ಯವಿಲ್ಲ. ವಿದ್ಯಾರ್ಥಿ ಸಮುದಾಯದ ದಿಕ್ಕು ಬದಲಾಗುವ ಸಾಧ್ಯತೆಯಿದೆ. ಈ ಬಗ್ಗೆ ಸರ್ಕಾರದ ಪ್ರಾಮಾಣಿಕ ಪ್ರಯತ್ನ ಬೇಕು. ಇಂದಿನ ವ್ಯವಸ್ಥೆಯಲ್ಲಿ ಬೆಂಗಳೂರಿನ ಕಮಿಷನರ್ ಆಗುವಂತವರು ಸಹ ಮಾಮೂಲಿ ಕೊಡುತ್ತಿದ್ದರು ಎಂಬ ವಿಷಯ ಕೇಳಿದಾಗ ಅವರಿಂದ ಕಾನೂನು ಸುವ್ಯವಸ್ಥೆ ಕಾಯಲು ಹೇಗೆ ಸಾಧ್ಯ?. ಪೊಲೀಸರು, ಸಬ್ ಇನ್ಸ್ ಪೆಕ್ಟರುಗಳು ಮಾಮೂಲಿ ಪಡೆದರು ಎಂಬುದಕ್ಕಿಂತ ಒಬ್ಬ ಬೆಂಗಳೂರಿನ ಕಮಿಷನರ್ ಆಗುವವರು ಮಾಮೂಲಿ ಸರ್ಕಾರಕ್ಕೆ ಕೊಡುತ್ತಿದ್ದರು ಎಂಬುದು ಇನ್ನೂ ಆತಂಕ ಹುಟ್ಟಿಸುವಂತಹುದು ಎಂದರು.
ಡ್ರಗ್ಸ್ ಮಾಫಿಯಾ ಮಾತ್ರವಲ್ಲದೇ, ವಿವಿಧ ಮಾಫಿಯಾಗಳಿಂದಾಗಿ ನಾವೆಲ್ಲರೂ ಇಂದು ತಲೆ ತಗ್ಗಿಸುವಂತಾಗಿದೆ. ಈ ಸರ್ಕಾರದ್ದು ಒಂದೇ ತಪ್ಪು ಎಂದು ಹೇಳುವುದಿಲ್ಲ. ಈವರೆಗೆ ಯಾವ ಯಾವ ಸರ್ಕಾರಗಳು ಅಧಿಕಾರ ನಡೆಸಿವೆಯೋ ಅವರೆಲ್ಲರೂ ಹೊಣೆ ಹೊರಬೇಕು. ಎಲ್ಲರೂ ಪಣ ತೊಟ್ಟು ಡ್ರಗ್ಸ್ ಮಾಫಿಯಾವನ್ನು ಬೇರು ಸಮೇತ ಕಿತ್ತೊಗೆಯಬೇಕು. ಇಲ್ಲವಾದಲ್ಲಿ ದೇಶದ ಭವಿಷ್ಯಕ್ಕೆ ಅಪಾಯವಿದೆ. ಕೆಲವರು ಹಣದ ಹಿಂದೆ ಬಿದ್ದು ಅವರ ತೆವಲಿಗಾಗಿ, ಮೋಜಿಗಾಗಿ ಕನ್ನಡಿಗರ ಮಾನ ಮರ್ಯಾದೆ ಹರಾಜು ಹಾಕಿದ್ದಾರೆ ಎಂದು ಶಾಸಕ ರಾಮಸ್ವಾಮಿ ವಾಗ್ದಾಳಿ ನಡೆಸಿದರು.