ಹಾಸನ:ವರ್ಷಕ್ಕೊಮ್ಮೆ ದರ್ಶನ ಕೊಡುವ ಹಾಸನಾಂಬೆ ದೇವಾಲಯದ ಬಾಗಿಲು ಇಂದು ತೆರೆಯುವ ಮೂಲಕ ಜಿಲ್ಲಾಡಳಿತ ವಿದ್ಯುಕ್ತವಾಗಿ ಚಾಲನೆ ನೀಡಿದೆ. ಮೊದಲ ದಿನ ಸಾರ್ವಜನಿಕರಿಗೆ ದರ್ಶನ ಭಾಗ್ಯ ಇರುವುದಿಲ್ಲ ಎಂದು ಸ್ಪಷ್ಟವಾಗಿ ಜಿಲ್ಲಾಡಳಿತ ಹೇಳಿದರೂ ಸಾವಿರಾರು ಭಕ್ತರು ಆಗಮಿಸಿ ಪೊಲೀಸರಿಗೆ ತಲೆನೋವಾಗಿರುವ ಪ್ರಸಂಗ ಇಂದು ನಡೆದಿದೆ.
ಬ್ಯಾರಿಕೇಡನ್ನು ಕಿತ್ತು ದೇವಿ ದರ್ಶನ: ಹಾಸನಾಂಬೆಯ ದರ್ಶನಕ್ಕೆ ಇವತ್ತು ಮೊದಲ ದಿನವಾಗಿದ್ದು ಸಾರ್ವಜನಿಕರಿಗೆ ದರ್ಶನ ಇರಲಿಲ್ಲ. ಆದರೆ ಇಂದಿನಿಂದ ದರ್ಶನ ಪ್ರಾರಂಭವಾಗುತ್ತದೆ ಎಂಬ ಕಾರಣಕ್ಕಾಗಿ ನಾನಾ ಕಡೆಯಿಂದ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಮೊದಲೇ ದಿನವೇ ಆಗಮಿಸಿ ದೇವಿ ದರ್ಶನಕ್ಕೆ ಮುಂದಾದರು. ಅಲ್ಲದೇ ಶಕ್ತಿ ಯೋಜನೆಯಿಂದ ಈ ಬಾರಿ ಹಾಸನಾಂಬ ದೇವಾಲಯಕ್ಕೆ 10 ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿ ಆಗಮಿಸುವ ಸಂಬಂಧ ಈ ಬಾರಿ, ಭದ್ರತೆಗಾಗಿ ಸುಮಾರು 1,200 ಪೊಲೀಸರನ್ನು ಇಲಾಖೆ ನಿಯೋಜನೆ ಮಾಡಿದೆ.
ಪ್ರತಿನಿತ್ಯ ಮೂರು ಪಾಳಿಯಲ್ಲಿ ಕೆಲಸ ಮಾಡುವುದರಿಂದ ಹಾಸನ ನಗರ ಮತ್ತು ವಿವಿಧ ತಾಲೂಕುಗಳ ಪೊಲೀಸರ ಜೊತೆಗೆ ಪಕ್ಕದ ಮಂಡ್ಯ, ಚಿಕ್ಕಮಗಳೂರು ಜಿಲ್ಲೆಯ ಪೊಲೀಸರನ್ನೂ ದರ್ಶನದ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಹಾಗೂ ಹಾಸನಾಂಬೆ ದೇವಾಲಯದ ಬಾಗಿಲು ತೆಗೆಯುವ ಮೊದಲು ಜಿಲ್ಲಾ ಉಸ್ತುವಾರಿ ಸಚಿವರು ಒಳ ಬರುತ್ತಿದ್ದಂತೆ ಹಿಂದೆಯೇ ನೂರಾರು ಜನ, ಕಾಂಗ್ರೆಸ್ ಕಾರ್ಯಕರ್ತರು ಬಂದಿದ್ದು, ಇವರನ್ನು ಪೊಲೀಸರು ತಡೆದರು.