ಕರ್ನಾಟಕ

karnataka

Hassan murder case : ಜೆಡಿಎಸ್ ಮುಖಂಡ ಕೃಷ್ಣೇಗೌಡ್ರ ಹತ್ಯೆ ಪ್ರಕರಣ.. 6 ಆರೋಪಿಗಳ ಬಂಧನ, ಉಳಿದವರಿಗಾಗಿ ತೀವ್ರ ಶೋಧಕಾರ್ಯ

By

Published : Aug 13, 2023, 6:59 AM IST

Updated : Aug 13, 2023, 7:12 AM IST

Hassan JDS leader murder: ಜೆಡಿಎಸ್ ಮುಖಂಡ ಕೃಷ್ಣೇಗೌಡ ಹತ್ಯೆ ಪ್ರಕರಣದ 6 ಆರೋಪಿಗಳನ್ನು ಬಂಧಿಸಲಾಗಿದ್ದು ಉಳಿದ ಪ್ರಮುಖ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಎಸ್​ಪಿ ಹರಿರಾಂ ಶಂಕರ್​ ತಿಳಿಸಿದ್ದಾರೆ.

JDS leader Krishna Gowdra
ಮೃತ ಜೆಡಿಎಸ್ ಮುಖಂಡ ಕೃಷ್ಣೇಗೌಡ್ರ

ಪ್ರಕರಣದ ಕುರಿತು ಎಸ್​ಪಿ ಹರಿರಾಂ ಶಂಕರ್ ಹೇಳಿಕೆ

ಹಾಸನ:ಆಗಸ್ಟ್​ 9ರಂದು ನಡೆದ ಗ್ರಾನೈಟ್ ಉದ್ಯಮಿ ಹಾಗೂ ಜೆಡಿಎಸ್ ಮುಖಂಡ ಕೃಷ್ಣೇಗೌಡ ಹತ್ಯೆ ಪ್ರಕರಣದ ಸಂಬಂಧ ಸದ್ಯ 6 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಉಳಿದ ಆರೋಪಿಗಳನ್ನು ಶೀಘ್ರ ಬಂಧಿಸುವುದಾಗಿ ಎಸ್ಪಿ ಹರಿರಾಂ ಶಂಕರ್ ತಿಳಿಸಿದರು.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಕೃಷ್ಣೇಗೌಡ ಕೊಲೆ ಪ್ರಕರಣದಲ್ಲಿ ಸದ್ಯ 6 ಮಂದಿಯನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಯೋಗಾನಂದ್ ಹೊನ್ನೇನಹಳ್ಳಿ ಹಾಗೂ ಇತರೆ 5 ಜನರನ್ನು ಶೀಘ್ರ ಬಂಧಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಜೆಡಿಎಸ್ ಮುಖಂಡನ ಕೊಲೆ ಮಾಡಲು ಕಳೆದ ಆರು ತಿಂಗಳ ಹಿಂದೆಯೇ ಒಂದು ಆರೋಪಿಗಳು ಪ್ಲಾನ್ ಮಾಡಿದ್ದರು. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿ, ಈ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ" ಎಂದು ತಿಳಿಸಿದರು.

ಪ್ರಕರಣ ವಿವರ: ''ಕೊಲೆಯಾದ ಕೃಷ್ಣೇಗೌಡರನ್ನು ಆರೋಪಿ ಸುರೇಶ್ ಪ್ರಮುಖ ಆರೋಪಿ ಯೋಗಾನಂದ್ ಹೊನ್ನೇನಹಳ್ಳಿಗೆ ಪರಿಚಯಮಾಡಿಕೊಟ್ಟಿದ್ದು, ಪರಿಚಯ ಸ್ನೇಹವಾಗಿ ತಿರುಗಿತ್ತು. ನಂತರ ಕೃಷ್ಣೇಗೌಡರ ಯಾವುದೋ ಒಂದು ಪ್ರಕರಣವನ್ನು ಪ್ರಮುಖ ಆರೋಪಿ ಬಗೆಹರಿಸಿಕೊಡುವಲ್ಲಿ ಸಫಲವಾಗಿದ್ದ. ಅದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಆರೋಪಿ ಯೋಗಾನಂದ್ ಹೊನ್ನೇನಹಳ್ಳಿ ಸ್ಥಳೀಯ ಚಾನಲ್ ಹಾಗು ಸಿನಿಮಾಗೆ ಬಂಡವಾಳ ಹೂಡಿಕೆ ಮಾಡಿಸುತ್ತಾನೆ.

ಕೋಟಿ ಕೋಟಿ ಹಣವನ್ನು ಬಂಡವಾಳವಾಗಿ ಹೂಡಿಕೆ ಮಾಡಿಸಿಕೊಂಡ ಬಳಿಕ ಮೋಸ ಮಾಡಿದ್ದಾನೆಂದು ಕೃಷ್ಣೇಗೌಡರಿಗೆ ಗೊತ್ತಾಗುತ್ತಿದ್ದಂತೆ ಯೋಗಾನಂದ್ ಜೊತೆ ಕೃಷ್ಣೇಗೌಡ ಜಗಳ ಮಾಡಿಕೊಂಡಿದ್ದರು. ಹಣ ವಾಪಸ್ ಕೊಡುವಂತೆ ಒತ್ತಾಯಿಸಿದ್ದರು. ಯೋಗಾನಂದ್ ಹಣವನ್ನು ಹಿಂದಿರುಗಿಸಲು ನಿರಾಕರಿಸಿದಾಗ ಕೃಷ್ಣೇಗೌಡ 2022ರ ನವೆಂಬರ್​ನಲ್ಲಿ ಆತನನ್ನೆ ಅಪಹರಿಸಿ ಸುಮಾರು 9 ದಿನಗಳ ಕಾಲ ಗೌಪ್ಯ ಸ್ಥಳದಲ್ಲಿ ಕೂಡಿಹಾಕಿ ಹಲ್ಲೆ ಮಾಡಿದ್ದರು. ಹಲ್ಲೆ ಮಾಡಿದ ಬಗ್ಗೆ ಹಾಸನ ಗ್ರಾಮಾಂತರ ಠಾಣೆಗೆ ಯೋಗಾನಂದ್ ದೂರು ಕೂಡ ನೀಡಿದ್ದ. ಇದರ ಪ್ರತಿಯಾಗಿ ಯೋಗಾನಂದ್ ವಿರುದ್ಧ ವಂಚನೆ ಆರೋಪದಲ್ಲಿ ಕೃಷ್ಣೇಗೌಡ ಕೂಡ ಪ್ರತಿದೂರು ನೀಡಿದ್ದರು.

ನಂತರ ಆರೋಪಿ ಯೋಗಾನಂದ್ ಕೃಷ್ಣೇಗೌಡನನ್ನು ಕೊಲೆ ಮಾಡಿದರೆ ಕೋಟಿ ಕೋಟಿ ಹಣ ನೀಡುವುದು ಉಳಿಯಲಿದೆ ಎಂದು ಯೋಚಿಸಿ ಕೊಲೆಗೆ ಸ್ಕೆಚ್ ಹಾಕಿದ್ದನು. ಅದರಂತೆ ಆರು ತಿಂಗಳಿಂದ ಸಂಚು ರೂಪಿಸಿ ಹತ್ಯೆಗೆ ಪ್ಲಾನ್ ಮಾಡಿದ್ದರು. ಆಗಸ್ಟ್ 9, 2023 ರಂದು ಮಧ್ಯಾಹ್ನ ಆರೋಪಿಗಳು, ಕೃಷ್ಣೇಗೌಡನ ಚಲನವಲನಗಳನ್ನು ಗಮನಿಸಿ ಕೊನೆಗೆ ಕೃಷ್ಣೇಗೌಡರ ಗ್ರಾನೈಟ್ ಫ್ಯಾಕ್ಟರಿ ಬಳಿಯೇ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದರು.

ಕೊಲೆ ಆರೋಪದ ಹಿನ್ನೆಲೆಯಲ್ಲಿ ಆರು ಜನರನ್ನು ಬಂಧಿಸಲಾಗಿದ್ದು, ಕೊಲೆಗೆ ಸಹಕರಿಸಿದ ಸ್ಥಳೀಯ ಖಾಸಗಿ ವಾಹಿನಿಯ ಪ್ರಮುಖ ಆರೋಪಿ ಯೋಗಾನಂದ್ ಹೊನ್ನೇನಹಳ್ಳಿ ಪತ್ನಿ ಸುಧಾರಾಣಿ (34), ಗೆಳತಿ ಅಶ್ವಿನಿ (36), ಮಾವ ಕೃಷ್ಣ ಕುಮಾರ್ (55), ಸಂಬಂಧಿ ಚೈತ್ರಾ (22) ಕಾರು ಚಾಲಕ ವೆಂಕಟೇಶ್ (24) ಸೇರಿದಂತೆ ಹೋಟೆಲ್ ಉದ್ಯಮಿ ಹಾಗೂ ಖಾಸಗಿ ವಾಹಿನಿಯ ಮಾಲೀಕ ಜೆ.ಎಸ್. ಸುರೇಶ್ (46) ಎಂಬುವರನ್ನು ಕೂಡ ಬಂಧಿಸಲಾಗಿದೆ'' ಎಂದು ಎಸ್​ಪಿ ಮಾಹಿತಿ ನೀಡಿದರು.

ಇನ್ನು, ಕೊಲೆ ಮಾಡಿ ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿ ಯೋಗಾನಂದ್ ಹೊನ್ನೇನಹಳ್ಳಿ, ಸಂಜಯ್ ಸೇರಿದಂತೆ 6 ಆರೋಪಿಗಳಿಗಾಗಿ ವಿಶೇಷ ಪೊಲೀಸ್ ತಂಡ ಶೋಧಕಾರ್ಯ ಮುಂದುವರೆಸಿದೆ.

ಇದನ್ನೂ ಓದಿ:Hassan murder: ಹಾಡಹಗಲೇ ಮಾಜಿ ಸಚಿವ ರೇವಣ್ಣ ಆಪ್ತನ ಬರ್ಬರ ಹತ್ಯೆ; ತನಿಖೆಗೆ ನಾಲ್ಕು ತಂಡ ರಚನೆ

Last Updated : Aug 13, 2023, 7:12 AM IST

ABOUT THE AUTHOR

...view details