ಗದಗ:ಭ್ರಷ್ಟ ರಾಜಕಾರಣಿಗಳನ್ನು ಜನ ಯಾವತ್ತೂ ಜನಪ್ರತಿನಿಧಿಗಳನ್ನಾಗಿ ಆರಿಸಿ ತರಬಾರದು ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಹಾಗೂ ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ ಹೇಳಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕಾರಣಿಗಳು ಅಧಿಕಾರಿಗಳ ಜೊತೆ ಶಾಮೀಲಾಗಿ ಮಾಡಬಾರದ ಮಹಾಪರಾಧ ಕೆಲಸಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಬೆಂಗಳೂರಿನ ವಿಧಾನಸೌಧದಲ್ಲಿ ಸಿಕ್ಕ ಹಣದ ಪ್ರಕರಣವೇ ಸಾಕ್ಷಿ ಎಂದು ಬೇಸರ ವ್ಯಕ್ತಪಡಿಸಿದರು.
ಸಮಾಜಕ್ಕೆ ಉತ್ತಮ ಸಂದೇಶ ಸಾರಿ:ಚಪ್ಪಾಳೆ ಆಗಬೇಕು ಅಂದರೆ ಅದು ಒಂದೇ ಕೈಯಿಂದ ಸಾಧ್ಯವಿಲ್ಲ. ಎರಡು ಕೈಗಳು ಸೇರಿದರೆ ಮಾತ್ರ ಅದು ಚಪ್ಪಾಳೆ ಆಗುತ್ತಿದೆ. ಇಲ್ಲಿಯೂ ಕೂಡ ಅದೇ ಆಗಿದೆ. ರಾಜಕಾರಣಿಗಳು ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡುವ ಬದಲಾಗಿ ಸ್ವಾರ್ಥ ಮತ್ತು ದುರಾಸೆ ಇಟ್ಟುಕೊಂಡು ಕೆಲಸ ಮಾಡಲಾಗುತ್ತಿದೆ. ಜನರೇ ಇಂತವರಿಗೆ ತಕ್ಕ ಪಾಠ ಕಲಿಸಬೇಕು. ಅದುವೇ ಅವರಿಗೆ ನೀಡಬೇಕಾಡ ಕಠಿಣ ಶಿಕ್ಷೆ. ಇಂತವರನ್ನು ನಿರ್ಲಕ್ಷ್ಯ ಮಾಡುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರಬೇಕು ಎಂದರು.
ಭಾಗಶಃ ರಾಜಕಾರಣಿಗಳು ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದಾರೆ. ಭ್ರಷ್ಟಾಚಾರದ ಸ್ವರೂಪ ಡಿ ಕೆ ಶಿವಕುಮಾರ್ ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ಮಾಡಬಾರದ ಕೆಲಸ ಮಾಡಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಜೈಲು ಸೇರಿ ಹೊರ ಬಂದಿದ್ದಾರೆ. ಮತ್ತೊಂದು ಕಡೆ ಮತ್ತೋರ್ವ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಬಡವರ ಭೂಮಿಯನ್ನು ಕಬಳಿಸಿಕೊಂಡು ಕುಳಿತಿದ್ದಾರೆ. ಇಂತಹ ರಾಜಕಾರಣಿಗಳನ್ನು ಜನ ಯಾವತ್ತೂ ಜನಪ್ರತಿನಿಧಿಗಳನ್ನಾಗಿ ಮಾಡಬಾರದು. ಅದಕ್ಕಾಗಿ ನಾವು ಜನಜಾಗೃತಿ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.