ಗದಗ:ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಕಿರುಕುಳಕ್ಕೆ ನೀಡಿದ್ದಾರೆ ಎಂದು ಡೆತ್ನೋಟ್ ಬರೆದಿಟ್ಟು ವಾಲ್ಮ್ಯಾನ್ವೋರ್ವ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ಶಿರಹಟ್ಟಿ ಪಟ್ಟಣದಲ್ಲಿ ಘಟನೆ ನಡೆದಿದೆ.
ಮೂಲತಃ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಗ್ರಾಮದ ಬಸವರಾಜ್ ಹೊಸೂರ(32) ಆತ್ಮಹತ್ಯೆ ಮಾಡಿಕೊಂಡಿರುವ ವಾಲ್ಮ್ಯಾನ್. ಈತ ಶಿರಹಟ್ಟಿ ಪಟ್ಟಣ ಪಂಚಾಯತ್ನಲ್ಲಿ ವಾಲ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. ಈತನಿಗೆ ಮುಖ್ಯಾಧಿಕಾರಿ ಶೋಭಾ ಬೆಳ್ಳಿಕೊಪ್ಪ ಅವರು ಕಿರುಕುಳ ನೀಡುತ್ತಿದ್ದರಂತೆ, ಇದರಿಂದ ಬೇಸತ್ತು ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ಪಂಚಾಯತ್ ಮುಖ್ಯಾಧಿಕಾರಿ ಕಿರುಕುಳ ಆರೋಪ: ವಾಲ್ಮ್ಯಾನ್ ನೇಣಿಗೆ ಶರಣು ಡೆತ್ನೋಟ್ ಬರೆದಿಟ್ಟ ವಾಲ್ಮ್ಯಾನ್:
ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಇತ್ತೀಚೆಗೆ ಅಕ್ರಮ ನಳಗಳ ಸಂಪರ್ಕ ಕಡಿತಗೊಳಿಸಿ ವರದಿ ನೀಡುವಂತೆ ಹೇಳಿದ್ದರಂತೆ. ವಿನಾಕಾರಣ ನನಗೆ ಕಿರುಕುಳ ನೀಡೋದಲ್ಲದೆ, ತಮ್ಮ ಮನೆಯ ಕೆಲಸವನ್ನೂ ಮಾಡಿಸಿಕೊಳ್ಳುತ್ತಿದ್ದರು. ಮಾಡಲ್ಲ ಅಂದ್ರೆ ಅವರ ಪತಿಯಿಂದ ಬೆದರಿಕೆ ಹಾಕಿಸ್ತಿದ್ರು ಎಂದು ಡೆತ್ನೋಟ್ ಬರೆದಿಟ್ಟು ಬಸವರಾಜ್ ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.
ಸಾರ್ವಜನಿಕರಿಂದ ಪ್ರತಿಭಟನೆ:
ಇನ್ನು ಬಸವರಾಜ್ ನ ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಪಟ್ಟಣ ಪಂಚಾಯತ್ ಬಳಿ ಜಮಾಯಿಸಿದ್ದ ಜನರು ಮುಖ್ಯಾಧಿಕಾರಿ ಶೋಭಾ ಬೆಳ್ಳಿಕೊಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಶಿರಹಟ್ಟಿ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಸ್ಥಳದಲ್ಲಿ ಪೊಲೀಸರು ಬೀಡುಬಿಟ್ಟಿದ್ದಾರೆ. ಗದಗ ಜಿಲ್ಲೆಯ ನಗರಾಭಿವೃದ್ಧಿ ಕೋಶ ಹಾಗೂ ಉಪವಿಭಾಗಾಧಿಕಾರಿಗಳು ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಪಡೆದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಘಟನೆಯ ಮಾಹಿತಿ ಪಡೆದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ನಗರಾಭಿವೃದ್ಧಿ ಕೋಶಾಧಿಕಾರಿ ರುದ್ರೇಶ್ ಅವರು, ಪಟ್ಟಣ ಪಂಚಾಯತ್ನ ಮುಖ್ಯಾಧಿಕಾರಿ ಶೋಭಾ ಬೆಳ್ಳಿಕೊಪ್ಪ ಕಿರುಕುಳ ನೀಡುತ್ತಿದ್ದರು ಅಂತ ಆರೋಪಿಸಲಾಗ್ತಿದೆ. ಆದ್ರೆ ಯಾರು ಸಹ ಲಿಖಿತವಾಗಿ ದೂರು ಬರೆದು ಕೊಡುತ್ತಿಲ್ಲ. ಯಾವುದೇ ನೌಕರರಿಗೆ ಸಂಬಳ ಬರದಿದ್ರೆ ಅಧಿಕಾರಿಗಳ ಕಿರುಕುಳ ಇದ್ರೆ, ಗಮನಕ್ಕೆ ತನ್ನಿ ಎಂದು ತಿಳಿಸಲಾಗಿತ್ತು. ದೂರು ಕೊಟ್ರೆ ತನಿಖೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ತಂದೆ ಮೃತಪಟ್ಟಿದ್ದಕ್ಕಾಗಿ ಅನುಕಂಪದ ಆಧಾರದ ಮೇಲೆ ಬಸವರಾಜನಿಗೆ ವಾಲ್ಮ್ಯಾನ್ ಕೆಲಸ ಸಿಕ್ಕಿತ್ತು. ಸಿಕ್ಕ ಕೆಲಸವನ್ನು ಚೆನ್ನಾಗಿಯೇ ನಿರ್ವಹಣೆ ಮಾಡ್ತಿದ್ದ ಬಸವರಾಜನ ಸಾವಿಗೆ ಮರುಗದ ಮನಸ್ಸೇ ಅಲ್ಲಿರಲಿಲ್ಲ. ಏನೇ ಆಗ್ಲಿ ಕಿರುಕುಳದ ಆರೋಪವೀಗ ಕೇಳಿ ಬಂದಿದ್ದು, ಸೂಕ್ತ ತನಿಖೆಯಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಅನ್ನೋದು ಸಾರ್ವಜನಿಕರ ಆಗ್ರಹವಾಗಿದೆ.