ಗದಗ:''ಲಿಂಗಾಯತ ಡ್ಯಾಂ ಒಡೆಯಲು ಇಂತಹ ಹತ್ತು ಮಂದಿ ಡಿ.ಕೆ. ಶಿವಕುಮಾರ್ ಬಂದರೂ ಸಾಧ್ಯವಿಲ್ಲ'' ಎಂದು ಬಿಜೆಪಿ ನಾಯಕ, ಸಚಿವ ಸಿ ಸಿ ಪಾಟೀಲ್ ಸವಾಲು ಹಾಕಿದರು.
ಲಿಂಗಾಯತರ ಡ್ಯಾಂ ಒಡೆದಿದೆ ಎಂಬ ಡಿಕೆಶಿ ಹೇಳಿಕೆಗೆ ಶನಿವಾರ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ''ಕಾಂಗ್ರೆಸ್ ಪಕ್ಷ ನಿಂತಲ್ಲಿಯೇ ಕುಸಿಯುತ್ತಿದೆ. ಹೀಗಾಗಿ ಡಿಕೆ ಶಿವಕುಮಾರ್ ಬಿಜೆಪಿಯ ಪಾರಂಪರಿಕ ಮತದಾರರನ್ನು ಹಾಗೂ ಬಿಜೆಪಿಗೆ ಬೆಂಬಲವಾಗಿ ನಿಂತಿರುವ ಲಿಂಗಾಯತರ ಬಗ್ಗೆ ಮಾತನಾಡಿದ್ದಾರೆ. ಲಿಂಗಾಯತ ಸಮಾಜ ಒಡೆದು ಹರಿದು ಕಾಂಗ್ರೆಸ್ ಪಕ್ಷ ಸೇರಿದೆ ಎಂಬುದಾಗಿ ಹೇಳಿಕೆ ನೀಡಿದ್ದಾರೆ. ಅವರು ಇಷ್ಟು ಅನನುಭವಿ ರಾಜಕಾರಣಿ ಅಂತ ಗೊತ್ತಿರಲಿಲ್ಲ. ಲಿಂಗಾಯತ ಮತಗಳು ಬಿಜೆಪಿ ಎಂಬ ಕಮಲ ಚಿಹ್ನೆಯ ಅಡಿಯಲ್ಲಿ ಬೆಳೆದು ಸುಭದ್ರವಾಗಿವೆ'' ಎಂದರು.
''ಲಿಂಗಾಯತ ಡ್ಯಾಂ ಒಡೆಯಲು ಇಂತಹ ಹತ್ತು ಜನ ಡಿ.ಕೆ. ಶಿವಕುಮಾರ್ ಬಂದರೂ ಸಾಧ್ಯವಿಲ್ಲ. ಲಿಂಗಾಯತರ ನಿಷ್ಠೆ, ಲಿಂಗಾಯತ ಸಮಾಜದ ಬೆಂಬಲ ಯಾವತ್ತೂ ಬಿಜೆಪಿಗೆ ಇದೆ. 10ರಂದು ಡ್ಯಾಂ ಲೇವಲ್ ಗೊತ್ತಾಗುತ್ತೆ. ಪ್ರತಿದಿನ ಡ್ಯಾಂ ಲೇವೆಲ್ ಗೇಜ್ ಮಾಡುತ್ತಿರುತ್ತೇವೆ. ಅದೇ ರೀತಿ 10ರಂದು ಲಿಂಗಾಯತ ಮತಗಳು ಹರಿದು ಬರಲಿವೆ. 13ರಂದು ಗೇಜ್ ಅಳೆಯುವಾಗ ನಿಮ್ಮ ಡ್ಯಾಂ ಖಾಲಿ ಇರುತ್ತದೆ. ಬಿಜೆಪಿ ಪಕ್ಷದ ಲೇವೆಲ್ ಗೇಜ್ ಭರ್ತಿ ಆಗಿರುತ್ತದೆ. ತುಂಬಿ ತುಳುಕುತ್ತಿರುತ್ತೆ'' ಎಂದು ಅವರು ಹೇಳಿದರು.
''ಯಾರೋ ಒಬ್ಬರು ಅಂದ್ರೆ, ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷಕ್ಕೆ ಹೋಗಿದ್ದಕ್ಕೆ ಅವರನ್ನು ಸ್ಟಾರ್ ಕ್ಯಾಂಪೇನ್ ಮಾಡುತ್ತೇವೆ ಎಂದು ಹೇಳಿ ಅವರು ನಮ್ಮ ನಾಯಕರು ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಬಿಜೆಪಿ ಪಕ್ಷದ ನಾಯಕನೊಬ್ಬರು ನಿಮ್ಮ ಪಕ್ಷಕ್ಕೆ ಬಂದಿದ್ದರಿಂದ ಶಕ್ತಿ ಬರುತ್ತೆ ಎಂದು ಅಂದುಕೊಂಡರೆ ನೀವು ಎಷ್ಟೊಂದು ಅಶಕ್ತರಿದ್ದೀರಿ ಎಂದು ಅರ್ಥವಾಗುತ್ತದೆ'' ಎಂದು ಅವರು ತಿಳಿಸಿದರು.