ಗದಗ: ಕ್ಷುಲ್ಲಕ ಕಾರಣಕ್ಕೆ ಪತಿ ಮಹಾಶಯನೊಬ್ಬ ಹೆಂಡತಿಯ ಮೇಲೆ ಸಂಶಯ ಪಟ್ಟು ಕೊಲೆಗೈದಿರುವ ಘಟನೆ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪರಶುರಾಮ ಹುಚ್ಚೀರಪ್ಪ ಹಳ್ಳಿಕೇರಿ ಎಂಬಾತ ಕೊಲೆಗೈದಿದ್ದು, ಪತ್ನಿ ರೇಖಾ ಪರಶುರಾಮ ಹಳ್ಳಿಕೇರಿ ಮೃತ ದುರ್ದೈವಿ ಎಂದು ತಿಳಿದು ಬಂದಿದೆ.
ಹೆಂಡತಿಯ ಮೇಲೆ ಸಂಶಯ; ಸಿಟ್ಟಿನ ಭರದಲ್ಲಿ ಕೊಲೆಗೈದ ಪತಿ ಮಹಾಶಯ - Gadag Latest News
ವಿನಾ ಕಾರಣ ಹೆಂಡತಿಯ ಮೇಲೆ ಸಂಶಯ ಮಾಡುತ್ತಿದ್ದ ಮಹಾಶಯನೊಬ್ಬ ಸಿಟ್ಟಿನ ಭರದಲ್ಲಿ ಆಕೆಯನ್ನು ಒದ್ದು ಕೊಲೆಗೈದಿದ್ದಾನೆ. ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪತ್ನಿ ರೇಖಾಳನ್ನು ಕುರಿ ಮೇಯಿಸಲು ಕರೆದೊಯ್ದಿದ್ದ ಪರಶುರಾಮ ಅಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದಿದ್ದನಂತೆ. ಆದ್ದರಿಂದ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದೆ. ಸಿಟ್ಟಿನ ಭರದಲ್ಲಿ ಪರಶುರಾಮನು ಪತ್ನಿಗೆ ಬಲವಾಗಿ ಒದ್ದಿದ್ದರಿಂದ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎನ್ನಲಾಗುತ್ತಿದೆ.
ವಿನಾ ಕಾರಣ ಹೆಂಡತಿಯ ಮೇಲೆ ಸಂಶಯ ಮಾಡುತ್ತಿದ್ದ ಪರುಶುರಾಮನಿಗೆ ಅನೇಕ ಬಾರಿ ಬುದ್ಧಿ ಹೇಳಲಾಗಿತ್ತಂತೆ. ಆದರೂ ತನ್ನ ಹಳೆ ಚಾಳಿಯನ್ನು ಮುಂದುವರೆಸಿದ್ದನಂತೆ. ಸುದ್ದಿ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆರೋಪಿ ಪರಶುರಾಮನನ್ನು ಬಂಧಿಸಿದ್ದಾರೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.