ಗದಗ: ಜಿಲ್ಲೆಯಲ್ಲಿ ಮಳೆಯಾರ್ಭಟ ಕಡಿಮೆಯಾಗಿದ್ದರೂ ಮಲಪ್ರಭೆಯ ಆರ್ಭಟ ಇನ್ನೂ ನಿಂತಿಲ್ಲ. ನದಿ ಮೈದುಂಬಿ ಹರಿಯುತ್ತಿರುವ ಪರಿಣಾಮ ನದಿ ಪಾತ್ರದ ಗ್ರಾಮಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಮಳೆ ಪ್ರಮಾಣ ಕಡಿಮೆಯಾಗಿದ್ದರೂ, ನವಿಲು ತೀರ್ಥ ಜಲಾಶಯದಿಂದ ನೀರು ಹರಿ ಬಿಡಲಾಗುತ್ತಿದೆ. ಹಾಗಾಗಿ ಗದಗ ಜಿಲ್ಲೆ ನರಗುಂದ ಹಾಗೂ ರೋಣ ತಾಲೂಕಿನ ಗ್ರಾಮಗಳು ನಲುಗಿ ಹೋಗಿವೆ.
ಅದರಲ್ಲೂ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮಕ್ಕೆ ನೀರು ನುಗ್ಗಿದ್ದು, ಗ್ರಾಮದ ಜನರಲ್ಲಿ ಆತಂಕ ಮನೆಮಾಡಿದೆ. ಕ್ಷಣ ಕ್ಷಣಕ್ಕೂ ನೀರಿನ ಮಟ್ಟ ಏರುತ್ತಿದ್ದು, ಕೊಣ್ಣೂರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿರುವ ಸೇತುವೆ ಮೇಲೆ ನೀರು ಹರಿಯುತ್ತಿದೆ.
ಪರಿಣಾಮ ಹುಬ್ಬಳ್ಳಿ- ವಿಜಯಪುರ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿದೆ. ಈ ಪ್ರವಾಹ ಬಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೂ ತಟ್ಟಿದ್ದು, ನಿನ್ನೆ ಬಾದಾಮಿ ಪ್ರವಾಸ ಕೈಗೊಂಡಿದ್ದ ಅವರು ಈ ಮಾರ್ಗ ಬಿಟ್ಟು ರೋಣ ಮಾರ್ಗವಾಗಿ ಬಾದಾಮಿಗೆ ಪ್ರಯಾಣಿಸಬೇಕಾಯಿತು.