ಗದಗ ಬೆಟಗೇರಿ ನಗರಸಭೆ ಜ್ಯೂನಿಯರ್ ಇಂಜಿನಿಯರ್ ಲೋಕಾಯುಕ್ತ ಬಲೆಗೆ ಗದಗ : ಗದಗ-ಬೆಟಗೇರಿ ನಗರಸಭೆ ಜ್ಯೂನಿಯರ್ ಇಂಜಿನಿಯರ್ ಜೆ ಇ ವಿರೇಂದ್ರ ಸಿಂಗ್ ಕಾಟೆವಾಲೆ ಅವರು ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಗುತ್ತಿಗೆದಾರನ ಹಣ ಬಿಡುಗಡೆ ಮಾಡಲು ವಿರೇಂದ್ರ ಸಿಂಗ್ ಅವರು ಹಣದ ಬೇಡಿಕೆ ಇಟ್ಟಿದ್ದರು. ಅದರಂತೆಯೇ ಗುತ್ತಿಗೆದಾರನಿಂದ 1 ಲಕ್ಷ 50 ಸಾವಿರ ರೂಪಾಯಿ ಹಣ ಪಡೆಯಲು ಮುಂದಾದ ವೇಳೆ ದಾಳಿ ಅಧಿಕಾರಿಗಳು ನಡೆಸಿದ್ದಾರೆ.
ನಗರಸಭೆ ವ್ಯಾಪ್ತಿಯ ಕಾಮಗಾರಿಯ ಬಿಲ್ ಪಡೆಯಲು ಲಂಚದ ಬೇಡಿಕೆ ಇಟ್ಟಿದ್ದರು ಎಂದು ತಿಳಿದುಬಂದಿದೆ. ಲಂಚ ಪಡೆದು ವಾಹನದಲ್ಲಿ ಇರುಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಎಸ್ ಪಿ ಸತೀಶ್ ಎಸ್ ಚಿಟಗುಬ್ಬಿ ನೇತೃತ್ವದಲ್ಲಿ ದಾಳಿ ನಡೆದಿದೆ. ಸಿಪಿಐ ರವಿ ಪುರುಷೋತ್ತಮ, ಪಿಎಸ್ಐ ಅಜಿತ್ ಕಲಾದಗಿ ಅವರಿಂದ ದಾಖಲೆ ಪರಿಶೀಲನೆ ನಡೆದಿದೆ.
ಬಿಬಿಎಂಪಿ ಆರೋಗ್ಯಾಧಿಕಾರಿ ರೆಡ್ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ :ಸೊಳ್ಳೆ ನಿಯಂತ್ರಣ ಔಷಧಿ ಸಿಂಪಡಣೆಗೆ ಗುತ್ತಿಗೆ ಪಡೆದಿದ್ದ ವ್ಯಕ್ತಿಗೆ ಬಾಕಿ ಹಣ ಬಿಡುಗಡೆಗೊಳಿಸಲು ಲಂಚ ಸ್ವೀಕರಿಸುತ್ತಿದ್ದ ಬಿಬಿಎಂಪಿ ವೈದ್ಯಕೀಯ ಆರೋಗ್ಯಾಧಿಕಾರಿಯನ್ನ ಲೋಕಾಯುಕ್ತ ಪೊಲೀಸರು (ಏಪ್ರಿಲ್ 27-2023)ರಂದು ವಶಕ್ಕೆ ಪಡೆದಿದ್ದರು. ಸಿ ವಿ ರಾಮನ್ ನಗರ ವಾರ್ಡ್ನ ಆರೋಗ್ಯಾಧಿಕಾರಿ ಶಿವೇಗೌಡ ವಿ ಎಂಬುವರನ್ನು 50 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗಲೇ ವಶಕ್ಕೆ ಪಡೆಯಲಾಗಿತ್ತು.
ಶ್ರೀನಿವಾಸುಲು ಎಂಬುವವರು ಸೊಳ್ಳೆ ನಿಯಂತ್ರಣ ಔಷಧಿ ಸಿಂಪಡಣೆಗೆ ಬಿಬಿಎಂಪಿಯಿಂದ ಗುತ್ತಿಗೆ ಪಡೆದಿದ್ದರು. ಪಾವತಿಸಬೇಕಾದ ಹಣಕ್ಕೆ ಪ್ರತಿಯಾಗಿ 80 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ವೈದ್ಯಾಧಿಕಾರಿ ಶಿವೇಗೌಡ, 30 ಸಾವಿರ ಮುಂಗಡವಾಗಿ ಸ್ವೀಕರಿಸಿದ್ದರು. ಉಳಿದ 50 ಸಾವಿರ ರೂ. ಲಂಚ ಸ್ವೀಕರಿಸುವಾಗ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡ ಲೋಕಾಯುಕ್ತ ಪೊಲೀಸರು ಹಲಸೂರಿನ ಕಚೇರಿಯಲ್ಲಿ ರೆಡ್ ಹ್ಯಾಂಡಾಗಿ ಲಂಚದ ಸಮೇತ ಆರೋಪಿತರನ್ನು ವಶಕ್ಕೆ ಪಡೆದಿದ್ದರು.
ಉದ್ಯಮಿ ನಿವಾಸದ ಮೇಲೆ ಸಿಸಿಬಿ ದಾಳಿ:ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಉದ್ಯಮಿಯೊಬ್ಬರ ಮನೆ ಹಾಗೂ ಕಚೇರಿಗಳ ಮೇಲೆ ಸಿಸಿಬಿ ಅಧಿಕಾರಿಗಳು (ಮಾರ್ಚ್ 4-2023) ರಂದು ದಾಳಿ ನಡೆಸಿದ್ದರು. ಈ ವೇಳೆ ಬರೋಬ್ಬರಿ 3 ಕೋಟಿ ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದರು. ಕೇಶ್ವಾಪೂರದ ರಮೇಶ್ ಬೊಣಗೇರಿ ಎಂಬವರ ಮನೆ ಮತ್ತು ಕಚೇರಿ ಮೇಲೆ ಸಿಸಿಬಿ ದಾಳಿ ನಡೆಸಿದ್ದರು. ಈ ವೇಳೆ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮೂರು ಕೋಟಿ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಸಿಸಿಬಿ ಡಿವೈಎಸ್ಪಿ ನಾರಾಯಣ ಬರಮನಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿತ್ತು.
ಖಚಿತ ಮಾಹಿತಿ ಮೇರೆಗೆ ಹುಬ್ಬಳ್ಳಿ ಧಾರವಾಡ ಸಿಸಿಬಿ ಪೊಲೀಸರು ಪ್ರತಿಷ್ಠಿತ ಉದ್ಯಮಿ ರಮೇಶ್ ಬೊಣಗೇರಿಯ ಭವಾನಿ ನಗರದ ಮನೆಯ ಮೇಲೆ ದಾಳಿ ಮಾಡಿದ್ದರು. ದಾಳಿಯ ಸಮಯದಲ್ಲಿ ಮೂರು ಕೋಟಿ ಹಣ ಪತ್ತೆಯಾಗಿತ್ತು. ಹಣದ ಆದಾಯದ ಮೂಲ ಮಾತ್ರ ಬಯಲಿಗೆ ಬಂದಿಲ್ಲ. ಉದ್ಯಮಿ ರಮೇಶ್ ಬೀಜ, ರಸಗೊಬ್ಬರ ಮತ್ತು ಕ್ರಿಮಿನಾಶಕ ಮಾರಾಟದ ವ್ಯಾಪಾರಿಯಾಗಿದ್ದಾರೆ. ಜೊತೆಗೆ ರಾಜ್ಯ ಸರ್ಕಾರದ ಕೃಷಿ ಇಲಾಖೆಗೂ ಸಹ ಬೀಜ, ರಸಗೊಬ್ಬರ ಮತ್ತು ಕ್ರಿಮಿನಾಶಕ ಸರಬರಾಜು ಮಾಡುತ್ತಿದ್ದಾರೆ. ಇವರ ಮನೆಯಲ್ಲಿ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿಟ್ಟುಕೊಂಡಿರುವ ಮಾಹಿತಿ ಪಡೆದ ಸಿಸಿಬಿ ಆರ್ಥಿಕ ಅಪರಾಧದ ವಿಭಾಗದ ಅಧಿಕಾರಿಗಳು ಈ ದಾಳಿ ನಡೆಸಿದ್ದರು.
ಇದನ್ನೂ ಓದಿ :ಉದ್ಯಮಿ ನಿವಾಸದ ಮೇಲೆ ಸಿಸಿಬಿ ದಾಳಿ: ಮೂರು ಕೋಟಿ ನಗದು ವಶ