ಲಿಂಗಾಯತ ಸಿಎಂ ಮಾಡುವ ವಿಚಾರವಾಗಿ ನಳೀನ್ ಕುಮಾರ್ ಕಟೀಲ್ ಪ್ರತಿಕ್ರಿಯೆ. ಗದಗ: ಈಗಾಗಲೇ ಬಿಜೆಪಿ ಲಿಂಗಾಯತ ಮುಖ್ಯಮಂತ್ರಿಗಳನ್ನು ಮಾಡಿದೆ. ಮುಂದೆಯೂ ಸಹ ಬಿಜೆಪಿಯೇ ಲಿಂಗಾಯತರನ್ನು ಮುಖ್ಯಮಂತ್ರಿ ಮಾಡೋದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ. ಲಿಂಗಾಯತ ಮುಖ್ಯಮಂತ್ರಿ ಹೇಳಿಕೆ ವಿಚಾರವಾಗಿ ನಗರದಲ್ಲಿ ಅವರು ಮಾತನಾಡಿದದರು.
ಬಿಜೆಪಿಯಲ್ಲಿಯೇ ಮೂರು ಸಾರಿ ಲಿಂಗಾಯತ ಮುಖ್ಯಮಂತ್ರಿ ಮಾಡಿದ್ದೇವೆ. ಮುಂದೆ ಮತ್ತೆ ಅಧಿಕಾರಕ್ಕೆ ಬಂದರೇ ಲಿಂಗಾಯತರನ್ನೇ ಮುಖ್ಯಮಂತ್ರಿ ಮಾಡುತ್ತೇವೆ. ಶಕ್ತಿ ಇದ್ದರೆ ಈ ಮಾತನ್ನು ಸಿದ್ರಾಮಣ್ಣ ಅಥವಾ ಡಿಕೆಶಿಗೆ ಹೇಳಲಿ. ಜೆಡಿಎಸ್ ಪಕ್ಷದವರಾದರೂ ಲಿಂಗಾಯತ ಮುಖ್ಯಮಂತ್ರಿ ಮಾಡುತ್ತೇವೆ ಎಂದು ಹೇಳಲಿ ಎಂದು ಕಟೀಲ್ ಸವಾಲು ಹಾಕಿದರು.
ಸಿಟಿ ರವಿ ಹಾಗೂ ಆರ್ ಅಶೋಕ ಮುಂದಿನ ಮುಖ್ಯಮಂತ್ರಿ ಎಂಬ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಾರ್ಟಿಯಲ್ಲಿ ಯಾವ ಸಿಎಂ ಚರ್ಚೆಗೂ ಅವಕಾಶವಿಲ್ಲ. ಈಶ್ವರಪ್ಪ ಹಾಗೂ ಆ ರೀತಿ ಹೇಳಿಕೆ ನೀಡೋರನ್ನು ಕರೆಸಿ ಮಾತನಾಡುತ್ತೇನೆ. ಎಲ್ಲವನ್ನೂ ಪಾರ್ಲಿಮೆಂಟರಿ ಬೋರ್ಡ್ ಯೋಚನೆ ಮಾಡುತ್ತೆ. ರಾಷ್ಟ್ರೀಯ ನಾಯಕತ್ವ ಘೋಷಣೆ ಮಾಡುತ್ತೆ ಎಂದರು.
2023ರ ವಿಧಾನಸಭಾ ಚುನಾವಣೆಯಲ್ಲಿ ನಾವು ಬಹುಮತದ ಸರ್ಕಾರ ರಚನೆ ಮಾಡುವುದು ನಿಶ್ಚಿತ. ಬಿಜೆಪಿಗೆ ಇಡೀ ರಾಜ್ಯದಲ್ಲಿ ಅಭೂತಪೂರ್ವ ಅಲೆ ಇದೆ. ಡಬಲ್ ಇಂಜಿನ್ ಸರ್ಕಾರದ ಬಗ್ಗೆ ಜನರ ಒಲುವು ಇದೆ. ಬಸವರಾಜ ಬೊಮ್ಮಾಯಿ ಹಾಗೂ ಯಡಿಯೂರಪ್ಪ ನಾಯಕತ್ವದಲ್ಲಿ ಅಭೂತಪೂರ್ವ ಯಶಸ್ಸು ಪಡೆಯಲಿದೆ. ಹಿಂದೆ ನಮ್ಮದು ಬಹುಮತದ ಸರ್ಕಾರ ಆಗಿರಲಿಲ್ಲ. ಆದರೆ, ಈ ಬಾರಿ ಬಹುಮತದ ಸರ್ಕಾರ ರಚನೆ ಮಾಡಲಿದ್ದೇವೆ ಎಂದು ನಳೀನ್ ಕುಮಾರ್ ಕಟೀಲ್ ಭವಿಷ್ಯ ನುಡಿದರು.
ಈ ಬಾರಿ ಗದಗ ಜಿಲ್ಲೆಯ ನಾಲ್ಕಕ್ಕೆ ನಾಲ್ಕೂ ಸ್ಥಾನಗಳನ್ನ ಬಿಜೆಪಿ ಗೆಲ್ಲುತ್ತೆ. ಕಾಂಗ್ರೆಸ್ ಪಕ್ಷಕ್ಕೆ ನಿರಾಸೆಯಾಗಿದೆ. ತುಷ್ಟೀಕರಣದ ರಾಜನೀತಿ ಹಾಗೂ ಭ್ರಷ್ಟಚಾರದಿಂದ ಜನ ಅವರನ್ನು ತಿರಸ್ಕಾರ ಮಾಡಿದ್ದಾರೆ. ಭಯೋತ್ಪಾದನೆಗೆ ಬೆಂಗಾವಲಾಗಿ ನಿಂತಿದ್ದು, ಸಿದ್ದರಾಮಯ್ಯ ಅವಧಿಯಲ್ಲಿ ಹಿಂದೂಗಳ ಹತ್ಯೆ ಆಗಿದೆ. ಜೈಲಲ್ಲಿರಬೇಕಾದ್ದ ಕಾರ್ಯಕರ್ತರನ್ನು ಬಿಡುಗಡೆ ಮಾಡಿದ್ದಾರೆ. ನಿರಂತರ ಗೋ ಹತ್ಯೆ ನಡೆದರು ಇದರ ವಿರುದ್ಧ ಗಟ್ಟಿಯಾಗಿ ತೀರ್ಮಾನ ತೆಗೆದುಕೊಳ್ಳದ ಕಾಂಗ್ರೆಸ್ ನಾಯಕರು, ಭಯೋತ್ಪಾದನೆಗೆ ತುಷ್ಟೀಕರಣ ಮಾಡಿದ್ದಾರೆ. ಗರೀಬಿ ಹಠಾವೋ ಯೋಜನೆ ತಂದು ಕೇವಲ ಮತ ಪಡೆದರು. ಆದರೇ ಯಾವುದೇ ಯೋಜನೆ ಅನುಷ್ಠಾನ ಆಗಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಅವರದೇ ಪಕ್ಷದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ಬೆಂಕಿ ಬಿದ್ದ ವೇಳೆ ಮನೆಗೆ ಭೇಟಿ ಕೊಡಲಿಲ್ಲ. ಆ ಪ್ರಕರಣದಲ್ಲಿದ್ದ ಸಂಪತ್ ರಾಜ್ನನ್ನು ಪಕ್ಷದಿಂದ ಉಚ್ಛಾಟನೆಯೂ ಮಾಡಲಿಲ್ಲ. ಅಖಂಡ ಶ್ರೀನಿವಾಸ ಮೂರ್ತಿಗೆ ಯಾವ ಸ್ಥಾನ ಕೊಡದೇ ಅವರು ಕಣ್ಣೀರು ಹಾಕುವಂತೆ ಮಾಡಿದರು. ಈ ಮೂಲಕ ಸಮಾಜವನ್ನು ಒಡೆಯುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಅಧಿಕಾರ ಇದ್ದಾಗ ವೀರಶೈವ ಲಿಂಗಾಯತ ಸಮಾಜವನ್ನು ಒಡೆಯುವ ಕೆಲಸ ಮಾಡಿದೆ. ಅಧಿಕಾರ ಬಿಟ್ಟಾಗ ಅವರ ಬಗ್ಗೆ ಕೆಟ್ಟದಾಗಿ ಮಾತಾಡುತ್ತಾರೆ. ಇದೆಲ್ಲವನ್ನು ಜನರು ಗಮನಿಸುತ್ತಿದ್ದಾರೆ ಎಂದರು.
ಈ ಪ್ರದೇಶದಲ್ಲಿ ಗೂಂಡಾಗಿರಿ ರಾಜಕಾರಣ ನೋಡಿದ್ದೇವೆ. ನಾಮಪತ್ರ ಸಲ್ಲಿಕೆ ಮಾಡುವ ವೇಳೆ ನಮ್ಮ ಅಭ್ಯರ್ಥಿ ಸೇರಿದಂತೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಯತ್ನ ಮಾಡಿದ್ದಾರೆ. ಗೂಂಡಾಗಿರಿಯಿಂದ ಈ ಕ್ಷೇತ್ರ ಗೆಲ್ಲಬಹುದೆಂದು ಪ್ರಯತ್ನ ಮಾಡಿದ್ದಾರೆ. ಆದರೇ ನಮ್ಮ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಈ ಬಾರಿ ಇಲ್ಲಿ ಗೆಲ್ಲುತ್ತಾರೆ ಎಂದು ಕಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ :ಚುನಾವಣಾ ಪ್ರಚಾರಕ್ಕೆ ಪ್ರಧಾನಿ ಮೋದಿ ಎಂಟ್ರಿ: ಆರು ದಿನ 23 ಕಡೆ ಮೋದಿ ಪ್ರಚಾರ