ಗದಗ:ಕರ್ತವ್ಯದ ಸಮಯದಲ್ಲಿ ಜನರ ಪ್ರಾಣ ರಕ್ಷಣೆಗಾಗಿ ನಿಜಾಮನ ಸೈನಿಕರ ಗುಂಡಿನ ದಾಳಿಗೆ ಎದೆಯೊಡ್ಡಿ ಪ್ರಾಣತ್ಯಾಗ ಮಾಡಿದ ಪೊಲೀಸರ ಸಾಹಸ ಸ್ಮರಿಸುವ ಲಡಾಯಿ ಕಟ್ಟೆಯೊಂದು ಗದಗ ಜಿಲ್ಲೆಯ ರೋಣ ತಾಲೂಕಿನ ಹಾಲಕೆರೆ ಮತ್ತು ಸಂಗನಾಳ ಗ್ರಾಮದ ಮಧ್ಯದ ಹೊಲದಲ್ಲಿದೆ. ಆದರೆ, ಪ್ರಾಣತ್ಯಾಗ ಮಾಡಿದ ಪೊಲೀಸರಿಗೆ ಗೌರವ ಸಲ್ಲಿಸಲು ಇಲಾಖೆಯವರು 39 ವರ್ಷಗಳಿಂದ ಬರುತ್ತಿಲ್ಲ. ಲಡಾಯಿ ಕಟ್ಟೆ ಅನಾಥವಾಗಿದೆ. ಈ ವರ್ಷದಿಂದಾರೂ ಈ ಮೊದಲಿನ ಪದ್ಧತಿಯಂತೆ ಲಡಾಯಿಕಟ್ಟೆಗೆ ಬಂದು ಸ್ಮರಿಸುವ ಕಾರ್ಯವಾಗಬೇಕಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಲಡಾಯಿ ಕಟ್ಟೆ ಹಿನ್ನಲೆ:ಹೈದರಾಬಾದ್ ನಿಜಾಮನ ಆಳ್ವಿಕೆಗೆ ಒಳಪಡುತ್ತಿದ್ದ ಪ್ರದೇಶಗಳು ಸ್ವಾತಂತ್ರ್ಯಾನಂತರ ಭಾರತದ ಒಕ್ಕೂಟಕ್ಕೆ ಸೇರುವಲ್ಲಿ ವಿಳಂಬವಾದವು. ಅಖಂಡ ಧಾರವಾಡ ಜಿಲ್ಲೆಯ ಹಾಲಕೆರೆ ಗ್ರಾಮವು ಮುಂಬೈ ಪ್ರಾಂತ್ಯದ ಕಟ್ಟಕಡೆಯ ಗ್ರಾಮವಾಗಿತ್ತು. ಶೇ 80ರಷ್ಟು ಈ ಗ್ರಾಮದ ರೈತರ ಜಮೀನುಗಳು ಹೈದರಾಬಾದ್ ಪ್ರಾಂತ್ಯದ ಗ್ರಾಮಗಳಾದ ಮುಧೋಳ, ಕರಮುಡಿ, ಯಲಬುರ್ಗಾ, ಕುಕನೂರ, ಸಂಗನಾಳ ಸೀಮೆಯಲ್ಲಿದ್ದವು. ಆದರೆ, ನಿಜಾಮನ ಸೈನಿಕರಿಂದ ಸದಾ ತೊಂದರೆ ಅನುಭವಿಸುತ್ತಿದ್ದರು.
ಜಮೀನಿನಲ್ಲಿ ಏನೇ ಬೆಳೆ ಬೆಳೆದರೂ ಅದನ್ನು ಆ ಪ್ರಾಂತ್ಯದ ಗ್ರಾಮಗಳಲ್ಲಿಯೇ ಮಾರಬೇಕಾಗಿತ್ತು. ಹೊಲದಲ್ಲಿ ಬೆಳೆದ ಫಸಲು, ದನಗಳಿಗೆ ಹೊಟ್ಟು ಮೇವು ಮನೆಗೆ ತರಲು ಅವಕಾಶ ಇರಲಿಲ್ಲ. ಕೆಲವೊಮ್ಮೆ ಗುಂಪು ಗುಂಪಾಗಿ ಹಾಲಕೆರೆಗೆ ಬಂದು ದರೋಡೆ ಮಾಡುತ್ತಿದ್ದರು. ರಜಾಕರ ಹಾಗೂ ನಿಜಾಮನ ಅನುಯಾಯಿಗಳ ಹಾವಳಿ ಮಿತಿಮೀರಿದಾಗ ಗ್ರಾಮದಲ್ಲಿ ಆಡಳಿತ ನಡೆಸುತ್ತಿದ್ದ ರಾವ್ ಬಹದ್ದೂರ ಮನೆತನದವರು ಹಾಗೂ ಮುಖಂಡರು ಸ್ವಾತಂತ್ರ್ಯದ ನಂತರ ಬಾಂಬೆ ವಿಭಾಗದ ಪ್ರಥಮ ಮುಖ್ಯಮಂತ್ರಿಯಾಗಿದ್ದ ಬಾಲಾಸಾಹೇಬ ಗಂಗಾಧರ ಖೇರ್ ಅವರ ಗಮನಕ್ಕೆ ತರುತ್ತಾರೆ.