ಗದಗ :ರಾಜ್ಯದಲ್ಲಿ ವರುಣ ಅಬ್ಬರ ಜೋರಾಗಿದೆ. ಬೆಳೆ ಕಟಾವಿನ ಸಮಯದಲ್ಲಿ ಮಳೆಯಾಗುತ್ತಿರುವುದು ರೈತರಿಗೆ ಸಂಕಷ್ಟ ಉಂಟು ಮಾಡಿದೆ.
ಗದಗದಲ್ಲಿ ಮಳೆಯಿಂದಾಗಿ ಬೆಳೆ ಹಾನಿ.. ಈ ಬಾರಿ ಉತ್ತಮವಾದ ಮಳೆಯಾದ ಪರಿಣಾಮ ಜಿಲ್ಲೆಯಲ್ಲಿ ರೈತರು ಸಮೃದ್ಧವಾಗಿ ಈರುಳ್ಳಿ, ಮೆಣಸಿನಕಾಯಿ, ಶೇಂಗಾ ಬೆಳೆಗಳನ್ನು ಬೆಳೆದಿದ್ದರು. ಇನ್ನೂ ಬೆಳೆಯನ್ನು ಕಟಾವು ಮಾಡಿ ಮನೆಗೆ ತರಬೇಕು ಎನ್ನುವಷ್ಟರಲ್ಲಿ ಮಳೆ ಆರಂಭವಾಗಿದೆ. ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ ರೈತರ ಬದುಕು ಮೂರಾಬಟ್ಟೆಯಾಗಿದೆ.
ಗದದ ಜಿಲ್ಲೆಯ ಶಿರಹಟ್ಟಿ, ಮುಂಡರಗಿ, ಲಕ್ಷ್ಮೇಶ್ವರ, ನರಗುಂದ, ರೋಣ, ಗಜೇಂದ್ರಗಡ ಸೇರಿದಂತೆ ಜಿಲ್ಲೆಯಾದ್ಯಂತ ಮಳೆಯಾಗುತ್ತಿದೆ. ಅದರಲ್ಲೂ ಗದಗ ತಾಲೂಕಿನ ಹುಲಕೋಟಿ ಗ್ರಾಮದ ರೈತರ ಸ್ಥಿತಿ ದುಸ್ತರವಾಗಿದೆ. ಕಟಾವಿಗೆ ಬಂದಿದ್ದ ಶೇಂಗಾ ಮಳೆಗೆ ಸಿಲುಕಿದ್ದು, ಜಮೀನಿನಲ್ಲೇ ಬೆಳೆ ಕೊಳೆತು ಹೋಗುವ ಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯಲ್ಲಿ ಅತಿ ಹೆಚ್ಚು ಈರುಳ್ಳಿ ಹಾಗೂ ಮೆಣಸಿನಕಾಯಿ ಬೆಳೆಯನ್ನು ಬೆಳೆಯುತ್ತಾರೆ. ಮಳೆಯಿಂದ ತೇವಾಂಶ ಹೆಚ್ಚಾಗಿ ಮೆಣಸಿನಕಾಯಿ ಬೆಳೆ ರೋಗಕ್ಕೆ ತುತ್ತಾಗುತ್ತಿದೆ. ಇದು ಈರುಳ್ಳಿ ಕಟಾವು ಮಾಡುವ ಸಮಯವಾಗಿದೆ.
ಕೆಲ ರೈತರು ಕಟಾವು ಮಾಡಿದರೆ, ಇನ್ನೂ ಕೆಲ ರೈತರು ಜಮೀನಿನಲ್ಲಿ ಬಿಟ್ಟಿದ್ದರು. ಆದರೆ, ಸತತ ಮಳೆಗೆ ಈರುಳ್ಳಿ ಬೆಳೆ ಕೊಳೆತು ಹೋಗುವ ಸ್ಥಿತಿ ತಲುಪಿದೆ. ಮಾರುಕಟ್ಟೆಗೆ ತೆಗೆದುಕೊಂಡು ಹೋಗದಂತಾಗಿದೆ.
ಸಾಲಸೋಲ ಮಾಡಿ ರೈತರು ಕಷ್ಟಪಟ್ಟು ಬೆಳೆ ಬೆಳೆದಿದ್ದಾರೆ. ಮಳೆಗೆ ಬೆಳೆದಿದ್ದ ಬೆಳೆ ಕಣ್ಣೆದುರೆ ನಾಶದ ಅಂಚಿಗೆ ಬಂದಿದೆ. ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಜಿಲ್ಲೆಯಾದ್ಯಂತ ಈರುಳ್ಳಿ ಹಾಗೂ ಮೆಣಸಿನಕಾಯಿ 28.40 ಹೆಕ್ಟೇರ್ ಪ್ರದೇಶದಲ್ಲಿ ಹಾನಿಗೊಳಗಾಗಿದೆ ಎಂದು ಅಂದಾಜಿಸಲಾಗಿದೆ. ಹಾಗಾಗಿ, ರೈತರು ಮಳೆಯಿಂದ ಉಂಟಾದ ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರಿ ಮಳೆ : ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ 'Yellow alert'