ಗದಗ:ಗದಗ ತಾಲೂಕಿನ ಶ್ಯಾಗೋಟಿ ಗ್ರಾಮದ ಬಳಿ ಅಕ್ರಮವಾಗಿ ತೆಗೆದ ಕ್ವಾರಿಯ ಹೊಂಡದಲ್ಲಿ ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ಮುಳುಗಿ ಸಾವನ್ನಪ್ಪಿದ್ದಾರೆ. ಬಸವರಾಜ್ ಮತ್ತು ಈರಣ್ಣ ಎಂಬ ಯುವಕರು ಮೊನ್ನೆ ಮಧ್ಯಾಹ್ನ ಸ್ನೇಹಿತರ ಜೊತೆಗೆ ಕ್ವಾರಿಯ ಹೊಂಡದಲ್ಲಿ ಈಜಲು ಹೋಗಿದ್ದರು. ಆದರೆ ಇದರಲ್ಲಿ ಓರ್ವನಿಗೆ ಈಜಲು ಬರುತ್ತಿರಲಿಲ್ಲ. ಹೀಗಾಗಿ ಈಜಲು ಬರದ ಗೆಳೆಯನನ್ನು ರಕ್ಷಣೆ ಮಾಡಲು ಹೋಗಿದ್ದವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಇದು ಗಣಿಗಾರಿಕೆ ಇಲಾಖೆಯ ಪರವಾನಿಗೆ ಇಲ್ಲದೇ ತೆಗೆದ ಕ್ವಾರಿ ಅಂತ ಹೇಳಲಾಗ್ತಿದೆ. ಸುಮಾರು ವರ್ಷಗಳಿಂದ ಇದನ್ನ ಮುಚ್ಚದೇ ಈ ಜಮೀನಿನ ಮಾಲೀಕ ನಿರ್ಲಕ್ಷ್ಯ ತೋರಿದ್ದಾನೆ. ಜೊತೆಗೆ ಕ್ವಾರಿಯ ಸುತ್ತ ಯಾವುದೇ ತಂತಿ ಬೇಲಿ ಹಾಕದೆ ನಿರ್ಲಕ್ಷ್ಯ ತೋರಿದ್ದಾರೆ. ಹೀಗಾಗಿ ದಿನನಿತ್ಯ 50 ರಿಂದ 60 ಯುವಕರು ಇಲ್ಲಿ ಈಜಾಡ್ತಿದ್ದಾರೆ. ಇಷ್ಟೆಲ್ಲಾ ದಿನನಿತ್ಯ ಕಣ್ಣುಮುಂದೆ ನಡೆಯುತ್ತಿದ್ದರೂ ಯಾರೂ ಈ ಬಗ್ಗೆ ಎಚ್ಚೆತ್ತುಕೊಂಡಿರಲಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.