ಗದಗ: ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದ ಬಳಿ ಹರಿದು ಹೋಗಿರುವ ಮಲಪ್ರಭಾ ನದಿಯಲ್ಲಿ ಮೊಸಳೆಯೊಂದು ಪ್ರತ್ಯಕ್ಷವಾಗಿದೆ. ನದಿಯಲ್ಲಿ ದಿಢೀರ್ ಕಾಣಿಸಿಕೊಂಡ ಬೃಹತ್ ಮೊಸಳೆಯಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಮಲಪ್ರಭಾ ನದಿಯಲ್ಲಿ ಮೊಸಳೆ ಪ್ರತ್ಯಕ್ಷ: ಬೆಚ್ಚಿಬಿದ್ದ ಹೊಳೆ ಆಲೂರು ಗ್ರಾಮಸ್ಥರು
ಇಂದು ಸಂಜೆ ವೇಳೆ ರೋಣ ತಾಲೂಕಿನ ಹೊಳೆ ಆಲೂರು ಗ್ರಾಮದ ಪಕ್ಕದ ನದಿಯ ದಂಡೆಯಲ್ಲಿ ಮೊಸಳೆಯೊಂದು ಪ್ರತ್ಯಕ್ಷವಾಗಿದೆ. ಈ ಹಿನ್ನೆಲೆ ನದಿ ತೀರಕ್ಕೆ ಯಾರೂ ಹೋಗದಂತೆ ಗ್ರಾಮದಲ್ಲಿ ಡಂಗುರ ಸಾರಿ ಎಚ್ಚರಿಕೆ ನೀಡಲಾಗಿದೆ.
ಮಲಪ್ರಭಾ ನದಿಯಲ್ಲಿ ಪತ್ತೆಯಾದ ಮೊಸಳೆ
ಈ ಹಿಂದೆ ಮಲಪ್ರಭಾ ನದಿ ಉಕ್ಕಿ ಪ್ರವಾಹ ಬಂದಿತ್ತು. ನದಿಗೆ ನವಿಲು ತೀರ್ಥ ಜಲಾಶಯದಿಂದ ಭಾರೀ ಪ್ರಮಾಣದ ನೀರು ಹರಿಬಿಡಲಾಗಿತ್ತು. ಪ್ರವಾಹದ ರಭಸಕ್ಕೆ ಮೊಸಳೆ ನದಿಗೆ ಬಂದಿರಬಹುದು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಮೊಸಳೆ ಕಂಡು ಗ್ರಾಮಸ್ಥರು ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಆದರೆ ಮೊಸಳೆ ಹಿಡಿಯುವ ಪ್ರಯತ್ನ ಮಾಡಿಲ್ಲ ಎನ್ನಲಾಗುತ್ತಿದೆ. ಹಾಗಾಗಿ ಇಂದು ಸಂಜೆ ವೇಳೆ ಗ್ರಾಮದ ಪಕ್ಕದ ನದಿಯ ದಂಡೆಯಲ್ಲಿ ಮೊಸಳೆ ಪತ್ತೆಯಾಗಿರುವ ಹಿನ್ನೆಲೆ ನದಿ ತೀರಕ್ಕೆ ಯಾರೂ ಹೋಗದಂತೆ ಗ್ರಾಮದಲ್ಲಿ ಡಂಗುರ ಸಾರಿ ಎಚ್ಚರಿಕೆ ನೀಡಲಾಗಿದೆ.