ಗದಗ: ಯಾರು ಏನ್ ಬೇಕಾದ್ರೂ ತಿನ್ನಬಹುದು ಅವರಿಗೆ ಸ್ವಾತಂತ್ರ್ಯ ಇದೆ. ಆದ್ರೆ, ಮಾಂಸ ತಿಂದು ದೇವಸ್ಥಾನಕ್ಕೆ ಹೋಗುತ್ತೇನೆ ಅನ್ನೋದು ಭಂಡತನ. ಇಂತಹ ಹೇಳಿಕೆಯನ್ನ ಯಾರೂ ಒಪ್ಪಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ರಾಜ್ಯ ಬಿಜೆಪಿ ವಿಜಯೇಂದ್ರ ಕಿಡಿಕಾರಿದ್ದಾರೆ.
ಇಂದು ಶಿರಹಟ್ಟಿ ಮತಕ್ಷೇತ್ರದ ಶಾಸಕ ರಾಮಣ್ಣ ಲಮಾಣಿಯವರ 71ನೇ ಜನ್ಮದಿನೋತ್ಸವಕ್ಕೆ ಬಂದಿರೋ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಲಕ್ಷ್ಮೇಶ್ವರದ ಮುಕ್ತಿಮಂದಿರಕ್ಕೆ ಭೇಟಿ ಕೊಟ್ಟರು, ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ, ಈ ರಾಜ್ಯದಲ್ಲಿ ಸಂಸ್ಕೃತಿ ಪರಂಪರೆ ಇದೆ, ಧಾರ್ಮಿಕ ಶ್ರದ್ಧೆ ಇದೆ, ದೈವವನ್ನು ನಂಬಿ ಜೀವನ ನಡೆಸುವ ಅಪಾರ ಜನ ಸಂಖ್ಯೆ ಇದೆ, ಉನ್ನತ ಸ್ಥಾನದಲ್ಲಿರುವವರು ರಾಜಕಾರಣದಲ್ಲಿ ಇರುವವರು ಬಹಿರಂಗವಾಗಿ ಹೇಳಿಕೆ ನೀಡ್ತಿದ್ದಾರೆ, ರಾಜಕಾರಣಿಗಳ ಹೇಳಿಕೆ, ಇತರರಿಗೆ ಘಾಸಿ ಆಗಬಾರದು ಎಂದ ಅವರು, ಅಧಿಕಾರಕ್ಕೆ ಬಂದೇ ಬಿಟ್ಟಿದ್ದೇವೆ ಅನ್ನೋ ವಿಶ್ವಾಸದಲ್ಲಿ ಕಾಂಗ್ರೆಸ್ ಇದೆ. ಬಿಜೆಪಿ ಹೈಕಮಾಂಡ್ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಉನ್ನತ ಸ್ಥಾನ ಕೊಟ್ಟಿದ್ದು ಕಾಂಗ್ರೆಸ್ ಗೆ ಆಘಾತ ಆಗಿದೆ ಎಂದು ಲೇವಡಿ ಮಾಡಿದರು.