ಹುಬ್ಬಳ್ಳಿ :ಅಯೋಧ್ಯೆಯಲ್ಲಿ ಇದೇ ತಿಂಗಳ 22ರಂದು ಶ್ರೀರಾಮಮಂದಿರದ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಈ ಹಿನ್ನೆಲೆ ಹುಬ್ಬಳ್ಳಿಯ ಯುವಕರೊಬ್ಬರು 1,799 ಕಿ.ಮೀ ದೂರದಲ್ಲಿರುವ ತನ್ನ ಆರಾಧ್ಯದೈವ ಶ್ರೀರಾಮಚಂದ್ರನ ದರ್ಶನಕ್ಕೆ ಪಾದಯಾತ್ರೆ ಹೊರಟಿದ್ದಾರೆ.
ಇಲ್ಲಿನ ಆನಂದ ನಗರದ ಸಮೀಪ ಘೋಡಕೆ ಪ್ಲಾಟ್‌ನ ಮಲ್ಲೇಶ್ವರ ನಗರದಲ್ಲಿ ತನ್ನ ತಾಯಿ, ಅಕ್ಕಂದಿರೊಂದಿಗೆ ವಾಸವಾಗಿರುವ ಯುವಕ ಮನೋಜ್ ಅರ್ಕಾಟ್ ಈಗ ಶ್ರೀರಾಮ ದರ್ಶನಕ್ಕೆ ಅಯೋಧ್ಯೆಗೆ ಪಾದಯಾತ್ರೆ ಬೆಳೆಸಿದ್ದಾರೆ. ಖಾಸಗಿ ಮಳಿಗೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮನೋಜ್ ಶ್ರೀರಾಮನ ಪರಮಭಕ್ತ. ಕಾಲ್ನಡಿಗೆಯಲ್ಲಿ ಅಯೋಧ್ಯೆಗೆ ಹೋಗುವುದಾಗಿ ತಿಳಿಸಿದಾಗ ಮನೆಯಲ್ಲಿ ಅಷ್ಟು ದೂರ ಒಬ್ಬನೇ ಹೋಗುವುದು ಬೇಡ ಎಂದು ತಾಯಿ ನೀಲಾ ಆರ್ಕಾಟ್ ಹೇಳಿದ್ದಾರೆ. ಕೊನೆಗೆ ಆ ದೇವರ ಇಚ್ಛೆಯಂತೆ ಆಗಲಿ ಎಂದು ಯಾತ್ರೆಗೆ ಕಳುಹಿಸಿಕೊಟ್ಟಿದ್ದಾರೆ.
ಈ ಬಗ್ಗೆ ಪಾದಯಾತ್ರೆ ಕೈಗೊಂಡ ಯುವಕ ಮನೋಜ್ ಅರ್ಕಾಟ್ ಅವರು ಮಾತನಾಡಿ, ಡಿ. 22ರಂದು ಹುಬ್ಬಳ್ಳಿ ಸಿದ್ಧಾರೂಢ ಸ್ವಾಮಿ ದರ್ಶನ ಪಡೆದು ಮಠದಿಂದ ಈ ಯಾತ್ರೆ ಪ್ರಾರಂಭಿಸಿದ್ದೇನೆ. ಇವತ್ತಿಗೆ ನನ್ನ ಯಾತ್ರೆ 22 ದಿವಸ ಕಂಪ್ಲೀಟ್ ಆಗಿದೆ. ಇವತ್ತು ನಾಳೆಯೊಳಗೆ ಈಗ ಮಧ್ಯಪ್ರದೇಶ ಪ್ರವೇಶ ಮಾಡುತ್ತೇನೆ. ಹುಬ್ಬಳ್ಳಿ, ನವಲಗುಂದ, ನರಗುಂದ,ಬಾಗಲಕೋಟೆ, ಬಿಜಾಪುರ ಬಂದೆ. ಅಲ್ಲಿಂದ ಮಹಾರಾಷ್ಟ್ರ ಬಂತು. ಅಲ್ಲಿಂದ ಸೊಲ್ಲಾಪುರ, ಲಾಥೋರ್, ನಾಂದೇಡ, ಲೋಹ ಅಲ್ಲಿಂದ ಮುಂದೆ ಬರುತ್ತಾ ನಾಗ್ಪುರ ದಾಟಿ ಬಂದೆ. ಬರುವಾಗ ಸ್ವಲ್ಪ ಕಷ್ಟ ಆಯಿತು. ಬರುವಾಗ ಕಾಲಿನಲ್ಲಿ ಗುಳ್ಳೆ ಬಂತು. ನಂತರ ಕಡಿಮೆಯಾಯಿತು.