ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ಹುಬ್ಬಳ್ಳಿ: "ಮಂತ್ರಾಕ್ಷತೆಯನ್ನು ನಾವು ಕೊಡುತ್ತಿದ್ದೇವೆ. ಇದರ ವಿವಾದವನ್ನು ಕಾಂಗ್ರೆಸ್ ಮಾಡುತ್ತಿದೆ. ನಮಗೆ ರಾಮಮಂದಿರದ ಉದ್ಘಾಟನೆ ಸುಸೂತ್ರವಾಗಿ ನಡೆಯಬೇಕು" ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ರಾಮಮಂದಿರ ಉದ್ಘಾಟನೆಯಲ್ಲಿ ಎಲ್ಲ ಭಕ್ತರು ಭಾಗಿಯಾಗಬೇಕು. ಇದು ಭಕ್ತಿ, ಶ್ರದ್ಧೆಯಿಂದ ನಡೆಯುವ ಕಾರ್ಯಕ್ರಮ. ಆದರೆ, ಕಾಂಗ್ರೆಸ್ ನವರು ನಮ್ಮ ಅಕ್ಕಿ ತಗೊಂಡು ಮಂತ್ರಾಕ್ಷತೆ ಕೊಟ್ಟಿದ್ದೇವೆ ಅಂತಿದ್ದಾರೆ. ನೀವು ಎಲ್ಲಿ ಅಕ್ಕಿ ಕೊಟ್ಟಿದ್ದೀರಿ. ಸುಳ್ಳು ಹೇಳುವವರಿಗೆ ನಾಚಿಕೆ, ಮಾನ ಮರ್ಯಾದೆ ಇರುವುದಿಲ್ಲ ಏನು ಬೇಕಾದರೂ ಮಾತನಾಡುತ್ತಾರೆ" ಎಂದು ಹರಿಹಾಯ್ದರು.
"ನೀವು ಒಂದು ಕಾಳು ಅಕ್ಕಿ ಕೊಟ್ಟಿಲ್ಲ. ಮೊದಲು ಶ್ರೀರಾಮನೇ ಇಲ್ಲ ಎಂದು ಸುಳ್ಳು ಹೇಳಿದ್ರಿ, ಶ್ರೀರಾಮ ಅಲ್ಲೇ ಹುಟ್ಟಿದ್ದನಾ? ಎಂದು ಕೇಳಿ ಅಪಮಾನ ಮಾಡಿದ್ರಿ, ಶ್ರೀರಾಮ ಜನ್ಮ ಭೂಮಿಯ ನಿರ್ಣಯವನ್ನು ಮಾಡಬಾರದು ಎಂದು ಹಿಂದೆ ಕಾಂಗ್ರೆಸ್ ಎಂಪಿ, ಸೋನಿಯಾ ಗಾಂಧಿ ಆಪ್ತ ಕಪಿಲ್ ಸಿಬಲ್ ಸುಪ್ರೀಂಕೋರ್ಟ್ನಲ್ಲಿ ದಾವೆ ಹಾಕಿದ್ದರು. ಈಗ ಕ್ರೆಡಿಟ್ ತೆಗೆದುಕೊಳ್ಳವುದಕ್ಕೆ ನಮ್ಮ ಅಕ್ಕಿ ಕೊಟ್ಟಿದ್ದೀರಿ ಎನ್ನುತ್ತಿದ್ದಾರೆ. ಕಾಂಗ್ರೆಸ್ ನವರು ಜನರ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ, ಆದರೆ ಜನರು ಬುದ್ಧಿವಂತರಿದ್ದಾರೆ" ಎಂದು ಹೇಳಿದರು.
ಐಎಸ್ಐಎಸ್ ಮಾದರಿ ಆಡಳಿತ ಎನ್ನದೇ ಮತ್ತೇನು ಅನ್ನಬೇಕು - ಜೋಶಿ: "ಯಾರು ರಾಮ ಭಕ್ತರಿದ್ದಾರೆ, ಬಿಜೆಪಿ ಪರ ಕೆಲಸ ಮಾಡುತ್ತಾರೆ ಅಂತವರನ್ನು ಹೊರಗೆ ಹಾಕಲು ಪ್ರಯತ್ನ ಮಾಡುತ್ತಿದ್ದಾರೆ. ನಾವು ಅಷ್ಟು ಸುಲಭವಾಗಿ ಹೋಗಲ್ಲ. ನಾವು ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡಿ ಇಲ್ಲಿ ಬಂದಿದ್ದೇವೆ. ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದವರು ನಿಮಗೆ ಅಮಾಯಕರು, ಕೆಜೆ ಹಳ್ಳಿ ಡಿಜೆ ಹಳ್ಳಿ ಗಲಭೆ ಮಾಡಿದವರು, ಪಿಎಫ್ಐ ಕಾರ್ಯಕರ್ತರು ಅಮಾಯಕರು. ಮಂಗಳೂರು ಬಾಂಬ್ ಬ್ಲಾಸ್ಟ್ ಮಾಡಿದವನು ನಿಮಗೆ ಸಹೋದರ. ಇದನ್ನು ಐಎಸ್ಐಎಸ್ ಮಾದರಿ ಆಡಳಿತ ಎನ್ನದೇ ಮತ್ತೇನು ಅನ್ನಬೇಕು ನಿಮಗೆ" ಎಂದು ವಾಗ್ದಾಳಿ ನಡೆಸಿದರು.
"ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಲ್ಲಿ ಅಕ್ಕಿ ಕೊಡುತ್ತಿದ್ದೇವೆ. ಆ ರಸೀದಿ ಕೊಡುವುದಕ್ಕೆ ಹೇಳಿದ್ದೇವೆ. ಇಲ್ಲ ಎಂದರೆ ಎಷ್ಟು ಕೆಜಿ, ಏನೂ ಎಂದು ರೆಕಾರ್ಡ್ ಉಳಿಯುವುದಿಲ್ಲ. ಇವರು ನಾವು ರಸೀದಿ ಕೊಡಲ್ಲ ಅಂದ್ರಲ್ಲ ಅಂದರೆ ಅರ್ಥ ಏನು?. ಇದು ಸಂಪೂರ್ಣ ಕೇಂದ್ರ ಸರ್ಕಾರದ ಬೊಕ್ಕಸದಿಂದ ಕೊಡುತ್ತಿರುವ ಯೋಜನೆ. ಕಾಂಗ್ರೆಸ್ನವರು 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಘೋಷಿಸಿದರು. ನನಗೂ ಫ್ರೀ, ನಿಮಗೂ ಫ್ರೀ ಎಂದಿದ್ದರು. ಈಗ ಅಕ್ಕಿ ಕೊಡಲಿ" ಎಂದು ಸವಾಲು ಹಾಕಿದರು.
ಇದನ್ನೂ ಓದಿ:ನಾನು ಖಂಡಿತ ನ್ಯಾಷನಲ್ ಲೀಡರ್ ಅಲ್ಲ: ಯತೀಂದ್ರ ಸಿದ್ದರಾಮಯ್ಯಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು