ಹುಬ್ಬಳ್ಳಿ: ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಕುಂದಗೋಳ ತಾಲೂಕಿನ ತರ್ಲಘಟ್ಟ ಗ್ರಾಮ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದು, ಚುನಾವಣೆ ಸಂದರ್ಭದಲ್ಲಿ ನೀಡಿರುವ ಭರವಸೆಗಳನ್ನೆಲ್ಲಾ ಗಾಳಿಗೆ ತೂರಿದಂತಾಗಿದೆ.
ಈ ಗ್ರಾಮದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ನೂರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಆದರೆ ಇವರಿಗೆ ಜೀವನಕ್ಕೆ ಬೇಕಾದ ಮೂಲಭೂತ ಸೌಕರ್ಯಗಳೇ ಇಲ್ಲದಂತಾಗಿದೆ. ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯೂ ಹಾಳಾಗಿದ್ದು, ಗ್ರಾಮಕ್ಕೆ ಮುಖ್ಯ ಸಂಪರ್ಕವೇ ಇಲ್ಲದಂತಾಗಿದೆ.
ಮೂಲಭೂತ ಸೌಲಭ್ಯಗಳಿಂದ ವಂಚಿತ ಗ್ರಾಮ ಇನ್ನು ಊರಿನಲ್ಲಿ 15 - 20 ದಿನಗಳಿಗೊಮ್ಮೆ ನೀರು ಬಿಡುವ ಕಾರಣ ಗ್ರಾಮದ ಜನರು ಕುಡಿಯಲು ನೀರನ್ನು ಅರಿಸಿ ದೂರದ ಪ್ರದೇಶಗಳಿಗೆ ಹೋಗುವಂತಹ ಪರಿಸ್ಥಿತಿ ಇದೆ. ಅಷ್ಟೆ ಅಲ್ಲದೇ ವಿದ್ಯುತ್ ಸಂಪರ್ಕ ಕೂಡ ಈ ಗ್ರಾಮಕ್ಕಿಲ್ಲ. ದಿನದ ನಾಲ್ಕು ತಾಸು ಮಾತ್ರ ವಿದ್ಯುತ್ ಕೊಡುವ ಕಾರಣ ಮಕ್ಕಳು ಓದಲು, ಮನೆಯ ಕೆಲಸ ಮಾಡಲು ತೊಂದರೆಯಾಗುತ್ತಿದೆ.
ಈ ಎಲ್ಲ ಸಮಸ್ಯೆಗಳಿಂದ ರೋಸಿ ಹೋದ ಗ್ರಾಮದ ಜನತೆ ಅದೆಷ್ಟೋ ಬಾರಿ ಸ್ಥಳೀಯ ಜನಪ್ರತಿನಿಧಿಗಳಿಗೆ ತಮ್ಮ ಸಮಸ್ಯೆಗಳನ್ನು ಹೇಳಿ ಮನವಿ ಮಾಡಿದ್ರು. ಆದರೆ ಯಾವುದೇ ಪ್ರಯೋಜನವಾಗಿಲ್ಲವಂತೆ. ಇನ್ನು ಜನಪ್ರತಿನಿಧಿಗಳು ಚುನಾವಣೆ ಬಂದಾಗ ಮಾತ್ರ ಮತ ಕೇಳಲು ಬರುವರೇ ಹೊರತು ಚುನಾವಣೆ ಮುಗಿದ ಮೇಲೆ ಇತ್ತ ಗಮನ ಹರಿಸಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ.