ಹುಬ್ಬಳ್ಳಿ:ವಿಶ್ವದ ಅತೀ ಉದ್ದವಾದ ಪ್ಲಾಟ್ ಫಾರ್ಮ್ ರಾಜ್ಯದ ವಾಣಿಜ್ಯ ನಗರಿ/ ನೈಋತ್ಯ ವಲಯದ ಕೇಂದ್ರ ಸ್ಥಾನ ಹುಬ್ಬಳ್ಳಿಯ ರೈಲು ನಿಲ್ದಾಣದಲ್ಲಿ ನಿರ್ಮಾಣವಾಗಲಿದೆ.
ಈಗಿರುವ ಒಂದನೇ ಪ್ಲಾಟ್‌ಫಾರ್ಮ್ 550 ಮೀಟರ್ ಉದ್ದವಿದ್ದು, ಅದನ್ನು 1,400 ಮೀಟರ್‌ಗೆ ಹೆಚ್ಚಿಸಲಾಗುತ್ತಿದೆ. ಹತ್ತು ಮೀಟರ್ ಅಗಲವಿರುತ್ತದೆ. ಈಗಿನ ತಪಾಸಣಾ ಕ್ಯಾರೇಜ್ ಮಾರ್ಗವನ್ನು ಪೂರ್ಣ ಪ್ಲಾಟ್‌ಫಾರ್ಮ್ ಆಗಿ ಪರಿವರ್ತಿಸಲಾಗುತ್ತಿದೆ. ಈಗಾಗಲೇ ಕೆಲಸ ಆರಂಭವಾಗಿದ್ದು, ಈ ವರ್ಷದ ಅಂತ್ಯದ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ.
ಈಶಾನ್ಯ ರೈಲ್ವೆಯ ಪ್ರಧಾನ ಕಚೇರಿ ಹೊಂದಿರುವ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ 1,366 ಮೀಟರ್ ಉದ್ದದ ಪ್ಲಾಟ್‌ಫಾರ್ಮ್ ಇದ್ದು, ಇದು ಸದ್ಯಕ್ಕೆ ವಿಶ್ವದ ಅತಿ ಉದ್ದದ ಪ್ಲಾಟ್‌ಫಾರ್ಮ್ ಎನ್ನುವ ಹೆಗ್ಗಳಿಕೆ ಹೊಂದಿದೆ. ಇದನ್ನೂ ಮೀರಿಸುವ ಉದ್ದನೆಯ ಪ್ಲಾಟ್‌ಫಾರ್ಮ್ ಹುಬ್ಬಳ್ಳಿಯಲ್ಲಿ ನಿರ್ಮಾಣವಾಗುತ್ತಿದೆ.
ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ವಿಶ್ವದಲ್ಲೇ ಅತೀ ಉದ್ದವಾದ ಪ್ಲಾಟ್ ಫಾರ್ಮ್
ಹುಬ್ಬಳ್ಳಿ–ಬೆಂಗಳೂರು ಜೋಡಿ ರೈಲು ಮಾರ್ಗ ಕಾರ್ಯ ಪ್ರಗತಿಯಲ್ಲಿದ್ದು, ಈ ಕಾರ್ಯ ಪೂರ್ಣಗೊಳಿಸುವ ಜೊತೆಗೆ ಹುಬ್ಬಳ್ಳಿ ನಿಲ್ದಾಣದಲ್ಲಿ ಒಟ್ಟು ಪ್ಲಾಟ್‌ಫಾರ್ಮ್‌ಗಳ ಸಂಖ್ಯೆಯನ್ನು 5ರಿಂದ 8ಕ್ಕೆ ಹೆಚ್ಚಿಸಲಾಗುತ್ತಿದೆ. ಗದಗ ರಸ್ತೆಯಲ್ಲಿ ಹೊಸದಾಗಿ ಇನ್ನೊಂದು ಪ್ರವೇಶ ದ್ವಾರ ಆರಂಭಿಸಲಾಗುತ್ತಿದೆ. ಪ್ಲಾಟ್ ಫಾರ್ಮ್ ನಿರ್ಮಾಣ, ಸಿಗ್ನಲ್, ವಿದ್ಯುತ್ ಸೇರಿದಂತೆ ಈ ಯೋಜನೆಗೆ ಒಟ್ಟು 90 ಕೋಟಿ ರೂ. ವೆಚ್ಚವಾಗಲಿದೆ.