ಧಾರವಾಡ: ಬಹುಮತ ಇಲ್ಲದಿದ್ದರೂ ಆಪರೇಷನ್ ಕಮಲ ಮಾಡಿ ಬಿಜೆಪಿಯವರು ಅಧಿಕಾರಕ್ಕೆ ಬಂದಿದ್ದಾರೆ. ಆದರೆ, ಬರೀ ಬಡಿದಾಟದಲ್ಲಿಯೇ ಇದ್ದಾರೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಪಿ. ನಾಡಗೌಡ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ, ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಸರ್ಕಾರಗಳು ಜನಪರವಾಗಿ ನಿಂತು ಈ ಸಮಸ್ಯೆಯಿಂದ ಹೊರ ಬರಬೇಕು. ರಾಜ್ಯದಲ್ಲಿ ಬರೀ ಬಡಿದಾಟವೇ ನಡೆದಿದೆ ಎಂದು ದೂರಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಪಿ. ನಾಡಗೌಡ ಕೇಂದ್ರ ಸರ್ಕಾರ ಡಿಮಾನಿಟೈಸೇಷನ್ ಮಾಡಿತು. ಜಿ.ಎಸ್.ಟಿಯನ್ನೂ ತಪ್ಪಾಗಿ ಜಾರಿ ಮಾಡಲಾಗಿದೆ. ಕಚ್ಚಾ ತೈಲ ಬೆಲೆ ಕಡಿಮೆ ಇದೆ. ಆದರೂ ಇಂಧನ ಬೆಲೆ ಹೆಚ್ಚಾಗಿದೆ. ಕೊರೊನಾ ಬಂದ ಮೇಲೆ ಆರ್ಥಿಕ ವ್ಯವಸ್ಥೆ ಹದಗೆಡುವಂತಾಗಿದೆ. ಕೊರೊನಾ ಹೆಸರಲ್ಲಿ ಎಲ್ಲರನ್ನೂ ಹೆದರಿಸಲಾಗಿದೆ. ಸರ್ಕಾರ ಜನರಿಗೆ ಧೈರ್ಯ ಕೊಡಬೇಕು. ಇದನ್ನು ಬಿಟ್ಟು ರೈತ ವಿರೋಧಿ ಮಸೂದೆ ತರುತ್ತಿದ್ದಾರೆ ಎಂದು ಕೇಂದ್ರದ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.
ಇಡೀ ರಾಜ್ಯ ರಾಜಕೀಯಕ್ಕೆ ಹೊಸ ನಾಯಕತ್ವ ಬರುತ್ತೆ ಎಂದಿದ್ದಾರೆ. ರಾಜ್ಯದಲ್ಲಿ ಹೊಸ ವ್ಯವಸ್ಥೆ ಬರಬೇಕೆಂಬ ಮಾತುಗಳು ಶುರುವಾಗಿವೆ. ಏನಾದರೂ ಮಾಡಿ ನಾಡಗೌಡರೇ ಎಂದು ನನ್ನನ್ನು ಕೇಳುತ್ತಿದ್ದಾರೆ. ಈ ಸಂಬಂಧ ಸಭೆಗಳನ್ನು ಆರಂಭ ಮಾಡಿದ್ದೇನೆ. ಅನೇಕ ಕಾರ್ಯಕರ್ತರನ್ನು ಭೇಟಿ ಮಾಡುತ್ತಿದ್ದೇನೆ. ರಾಜ್ಯಕ್ಕೆ ಪರ್ಯಾಯ ಶಕ್ತಿ ಕೊಡಬೇಕಾಗಿದೆ. ಜನತಾ ಪರಿವಾರ ಶಬ್ದ ಬಿಟ್ಟು ಹೊಸ ತರಹ ವಿಚಾರ ಮಾಡುತ್ತಿದ್ದೇವೆ ಎಂದರು.