ಕರ್ನಾಟಕ

karnataka

ETV Bharat / state

ನೈರುತ್ಯ ರೈಲ್ವೆಗೆ ₹2,755 ಕೋಟಿ ಆದಾಯ; ಸಮಯಪಾಲನೆಯಲ್ಲಿ 3ನೇ ಸ್ಥಾನ

ನೈರುತ್ಯ ರೈಲ್ವೆಯು ಸಮಯಪಾಲನೆಯಲ್ಲಿ ಶೇ. 93ರಷ್ಟು ಸಾಧಿಸಿ 3ನೇ ಸ್ಥಾನ ಪಡೆದುಕೊಂಡಿದೆ.

south-western-railway-has-a-revenue-of-rs-2755-crore-and-3rd-position-in-punctuality
ನೈರುತ್ಯ ರೈಲ್ವೆಯು ಪ್ಯಾಸೆಂಜರ್‌ ಆದಾಯದಲ್ಲಿ ರೂ. 2,755 ಕೋಟಿ ದಾಖಲೆ: ಸಮಯಪಾಲನೆಯಲ್ಲಿ 3ನೇ ಸ್ಥಾನ

By

Published : Apr 13, 2023, 3:16 PM IST

ಹುಬ್ಬಳ್ಳಿ: ಭಾರತೀಯ ರೈಲ್ವೆಯ ಎಲ್ಲ ವಲಯಗಳ ಪೈಕಿ ನೈರುತ್ಯ ರೈಲ್ವೆಯು ಸಮಯಪಾಲನೆಯಲ್ಲಿ ಶೇ.93.12ರಷ್ಟು ಸಾಧನೆ ಮಾಡಿದ್ದು 3ನೇ ಸ್ಥಾನ ದೊರೆತಿದೆ. 2022-23ರ ಹಣಕಾಸು ವರ್ಷದಲ್ಲಿ ನೈರುತ್ಯ ರೈಲ್ವೆಯು, ಪ್ರಯಾಣಿಕರ ಬೇಡಿಕೆಗಳಿಗೆ ಅನುಗುಣವಾಗಿ ಹೆಚ್ಚಿನ ರೈಲು ಸೇವೆ ಒದಗಿಸುವ ಉದ್ದೇಶ ಹಾಗೂ ಸಮಯಪಾಲನೆಯ ಸುಧಾರಣೆಗಾಗಿ ಹಲವು ಕ್ರಮಗಳನ್ನು ಕೈಗೊಂಡಿದೆ. ಪ್ರಯಾಣಿಕರ ಮೂಲಸೌಕರ್ಯಗಳ ಉನ್ನತೀಕರಣ ಕಾರ್ಯ ಕೈಗೊಂಡ ಹೊರತಾಗಿಯೂ (ಇಂಜಿನಿಯರಿಂಗ್ ಕಾಮಗಾರಿಗಳು ನಿರಂತರವಾಗಿ ನಡೆಯುತ್ತಿದ್ದರೂ ಕೂಡಾ) ಸಮಯ ಪಾಲನೆಯಲ್ಲಿ ಮುಂಚೂಣಿಯಲ್ಲಿದೆ.

2022-23ರ ಆರ್ಥಿಕ ವರ್ಷದ ಅವಧಿಯಲ್ಲಿ 116 ರೈಲುಗಳ ವೇಗ ಹೆಚ್ಚಿಸಲಾಗಿದ್ದು, ಒಟ್ಟಾರೆ 2,816 ನಿಮಿಷಗಳ ಸಮಯ ಉಳಿಸಿದಂತಾಗಿದೆ. ವಿದ್ಯುದೀಕರಣ ವೇಗ ಪಡೆದುಕೊಂಡಿರುವುದರಿಂದ ಮಾಲಿನ್ಯ ಕಡಿಮೆಗೊಳಿಸಲು ಮತ್ತು ಡೀಸೆಲ್ ಉಳಿಸಲು 24 ರೈಲುಗಳನ್ನು ವಿದ್ಯುತ್‌ಗೆ ವರ್ಗಾವಣೆ ಮಾಡಲಾಗಿದೆ. ರಜೆ ಮತ್ತು ಹಬ್ಬದ ಸಮಯದಲ್ಲಿ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ 291 ವಿಶೇಷ ರೈಲುಗಳನ್ನು (ಒಟ್ಟು 3,028 ಟ್ರಿಪ್‌ಗಳು) ವಿವಿಧ ಸ್ಥಳಗಳಿಗೆ ಓಡಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ 253 ಬೋಗಿಗಳನ್ನು ಶಾಶ್ವತ ಮತ್ತು 224 ಬೋಗಿಗಳನ್ನು ತಾತ್ಕಾಲಿಕವಾಗಿ ಹೆಚ್ಚಿಸಲಾಗಿದೆ.

ಇದನ್ನೂ ಓದಿ:ಕೋಡಿಂಬಾಳ, ಕಾಣಿಯೂರು, ಎಡಮಂಗಲ ರೈಲ್ವೆ ನಿಲ್ದಾಣ ಅಭಿವೃದ್ಧಿ: ರೈಲ್ವೆ ಇಲಾಖೆ

2022-23ರ ಆರ್ಥಿಕ ವರ್ಷದಲ್ಲಿ ನೈರುತ್ಯ ರೈಲ್ವೆ 150.34 ಮಿಲಿಯನ್‌ಗೂ ಹೆಚ್ಚು ಪ್ರಯಾಣಿಕರನ್ನು ಸಾಗಿಸುವ ಮೂಲಕ ರೂ. 2,755.35 ಕೋಟಿ ಆದಾಯ ಗಳಿಸಿದೆ. ನೈರುತ್ಯ ರೈಲ್ವೆ ವಲಯದ ಇತಿಹಾಸದಲ್ಲಿ ಇದು ಸಾರ್ವಕಾಲಿಕ ಅತ್ಯಧಿಕ ಪ್ರಯಾಣಿಕರ ಆದಾಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಪ್ರಯಾಣಿಕರ ಬೇಡಿಕೆಯನ್ನು ಪೂರೈಸಲು ನೈರುತ್ಯ ರೈಲ್ವೆ ಸದಾ ಬದ್ಧವಾಗಿದೆ. ಅಗತ್ಯಕ್ಕೆ ಅನುಗುಣವಾಗಿ ಅನೇಕ ಮಾರ್ಗಗಳಲ್ಲಿ ಹಲವಾರು ವಿಶೇಷ ರೈಲುಗಳ ಹೆಚ್ಚುವರಿ ಸೇವೆಗಳನ್ನು ಒದಗಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ 2,330ಕ್ಕೂ ಹೆಚ್ಚು ಬೋಗಿಗಳನ್ನು ಹೆಚ್ಚುವರಿಯಾಗಿ ಜೋಡಿಸಲಾಗಿದೆ" ಎಂದು ಪ್ರಧಾನ ಮುಖ್ಯ ಕಾರ್ಯಾಚರಣೆ ವ್ಯವಸ್ಥಾಪಕ ಹರಿಶಂಕರ್ ವರ್ಮಾ ಮಾಹಿತಿ ನೀಡಿದ್ದಾರೆ.

ಪ್ರಯಾಣಿಕರ ಬೇಡಿಕೆ ಪೂರೈಸಲು ಯೋಜನೆ ಮತ್ತು ರೈಲುಗಳನ್ನು ಓಡಿಸುವಲ್ಲಿ ಪ್ರಮುಖ ಪಾತ್ರವಹಿಸಿ ಈ ಸಾಧನೆಗೆ ಕಾರಣರಾದ ವಿಭಾಗವನ್ನು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಶ್ಲಾಘಿಸಿದ್ದಾರೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ :ಶೀಘ್ರದಲ್ಲೇ ಬೆಂಗಳೂರು-ಮುಂಬೈ, ಬೆಂಗಳೂರು-ಹೈದರಾಬಾದ್ ನಡುವೆ ವಂದೇ ಭಾರತ್ ರೈಲು: ಸಚಿವ ಸೋಮಣ್ಣ

ABOUT THE AUTHOR

...view details