ಹುಬ್ಬಳ್ಳಿ:ಎಸ್‌ಸಿ, ಎಸ್‌ಟಿ ಸಮುದಾಯಗಳ ಮೇಲೆ ಶೋಷಣೆ ಮಾಡಿದರೆ ಆರೋಪಿಗಳ ವಿರುದ್ಧ ಬಳಸುವ ದೌರ್ಜನ್ಯ ತಡೆ ಕಾಯಿದೆಯನ್ನು ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಮುತ್ತಣ್ಣವರ ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ದೌರ್ಜನ್ಯ ತಡೆ ಕಾಯ್ದೆ ದುರುಪಯೋಗದ ಆರೋಪ; ತನಿಖೆಗೆ ಶಿವಾನಂದ ಮುತ್ತಣ್ಣವರ ಒತ್ತಾಯ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಈ ಕುರಿತು ಪೊಲೀಸ್ ಆಯುಕ್ತರು ಹುಬ್ಬಳ್ಳಿ - ಧಾರವಾಡ ಮಹಾನಗರದ ಪೊಲೀಸ್ ಠಾಣೆ ಹಾಗೂ ಎಸಿಪಿ ಕಾರ್ಯಾಲಯಗಳಿಗೆ ಸೂಕ್ತ ಸಲಹೆ ನೀಡಬೇಕೆಂದು ಒತ್ತಾಯಿಸಿದರು.
ಕೆಲವರು ತಮ್ಮ ಸ್ವಹಿತಾಸಕ್ತಿಗೆ ಅನುಗುಣವಾಗಿ ಈ ಕಾಯ್ದೆಯ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅದರಂತೆ ಮೇ.17 ರಂದು ದೂರವಾಣಿ ಮೂಲಕ ಮಾತನಾಡಿದ ವ್ಯಕ್ತಿಯ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸಿ ಈಗಾಗಲೇ ಆತನನ್ನು ಜೈಲಿಗೆ ಹಾಕಿದ್ದಾರೆ. ಆದರೆ ದೂರವಾಣಿಯಲ್ಲಿ ಮಾತನಾಡಿದ ಮಾತ್ರಕ್ಕೆ ಆ ಧ್ವನಿ ಆತನದ್ದೇ ಎಂದು ಲ್ಯಾಬ್ ಮುಖಾಂತರ ಪರಿಶೀಲಿಸಿದ ನಂತರ ಆರೋಪಿಗೆ ಶಿಕ್ಷೆ ನೀಡುವ ವಿಚಾರ ಕಾನೂನಿನಲ್ಲಿದೆ.
ಪೊಲೀಸ್ ಇಲಾಖೆ ತನಿಖೆ ಮಾಡದೇ ಜಾತಿ ನಿಂದನೆ ಪ್ರಕರಣಕ್ಕೆ ಅಮಾಯಕ ಹಿಂದುಳಿದ ವರ್ಗಕ್ಕೆ ಸೇರಿದ ಕೃಷ್ಣಾಸಾ ಪುಂಡಲೀಕಸಾ ರಾಯಬಾಗಿ ಎಂಬಾತನ ಮೇಲೆಯೂ ಕೇಸ್ ದಾಖಲಿಸಿದ್ದಾರೆ. ಆದರೆ ಈ ಪ್ರಕರಣಕ್ಕೂ ವ್ಯಕ್ತಿಗೂ ಯಾವುದೇ ರೀತಿಯಿಂದ ಸಂಬಂಧವಿರುವುದಿಲ್ಲ. ಕುಮಾರ ವಲ್ದಾರ ಎಂಬಾತನು ಸುಖಾಸುಮ್ಮನೆ ರಾಯಬಾಗಿ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದರು.