ಹುಬ್ಬಳ್ಳಿ:ಹುಬ್ಬಳ್ಳಿ-ಧಾರವಾಡ ವಾಣಿಜ್ಯ ನಗರಿಯಲ್ಲೀಗ ಸ್ಮಾರ್ಟ್ ಸಿಟಿ ಯೋಜನೆಯಡಿ ಕಾಮಗಾರಿಗಳು ನಡೆಯುತ್ತಿವೆ. ಆದ್ರೆ ಈ ಕಾಮಗಾರಿಗಳು ಸಾರ್ವಜನಿಕರ ಪ್ರಾಣಕ್ಕೆ ಕಂಟಕವಾಗಿ ಪರಿಣಮಿಸುತ್ತಿದ್ದು, ಇಂದು ಬಾಲಕಿವೋರ್ವಳು ಸಾವನ್ನಪ್ಪಿದ್ದಾಳೆ.
ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ನಡೆಯುತ್ತಿದ್ದ ಕಾಮಗಾರಿಯ ಹೊಂಡದಲ್ಲಿ ಬಿದ್ದು ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ನಗರದ ಇಂದಿರಾ ಗಾಜಿನ ಮನೆಯ ಆವರಣದ ಬಳಿ ನಡೆಯುತ್ತಿದ್ದ ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಯ ಹೊಂಡದ ಪಕ್ಕದಲ್ಲೇ ಮೂವರು ಬಾಲಕರು ಹಾಗೂ ಓರ್ವ ಬಾಲಕಿ ಆಟವಾಡುತ್ತಿದ್ದರು. ಈ ವೇಳೆ ಹೊಂಡಕ್ಕೆ ಬಿದ್ದ ಪರಿಣಾಮ ಬಾಲಕಿ ಮುಳುಗಿ ಸಾವನ್ನಪ್ಪಿದ್ದಾಳೆ.
ಗಿರಣಿಚಾಳದ ತ್ರಿಶಾ ಎಂಬ ಬಾಲಕಿ ಮೃತಪಟ್ಟವಳು. ಈಕೆ ಜೊತೆಗೆ ಹೊಂಡಕ್ಕೆ ಬಿದ್ದಿದ್ದ ಮೂವರು ಬಾಲಕರನ್ನು ಸ್ಥಳೀಯ ವಿಕಲಚೇತನ ಯುವಕ ಸುರೇಶ ಹೊರಕೇರಿ ರಕ್ಷಿಸಿದ್ದಾರೆ. ಈ ಮೂವರು ಬಾಲಕರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಮಾರ್ಟ್ ಸಿಟಿ ಯೋಜನೆಯಡಿ ಕಾಮಗಾರಿಗಾಗಿ 15 ಅಡಿ ಹೊಂಡ ತೆಗೆದು ಹಾಗೆಯೇ ಬಿಟ್ಟ ಪರಿಣಾಮ ಹೊಂಡದಲ್ಲಿ ಸಂಪೂರ್ಣವಾಗಿ ನೀರು ತುಂಬಿದೆ. ಆಟವಾಡುವ ವೇಳೆ ಮಕ್ಕಳು ಹೊಂಡದಲ್ಲಿ ಬಿದ್ದಿದ್ದಾರೆ. ಅದೃಷ್ಟವಶಾತ್, ಸುರೇಶ ಹೊರಕೇರಿ ಗಮನಿಸಿದ್ದರಿಂದ ಮೂವರು ಬಾಲಕರು ಬದುಕುಳಿದಿದ್ದಾರೆ. ಬಾಲಕಿಯನ್ನು ಬಚಾವ್ ಮಾಡವಷ್ಟರೊಳಗಾಗಿ ಆಕೆ ಮೃತಪಟ್ಟಿದ್ದಾಳೆ. ಸದ್ಯ ಈ ಸಂಬಂಧ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.