ಹುಬ್ಬಳ್ಳಿ : ಮುಂದಿನ ವರ್ಷದ ಸಂಕ್ರಾಂತಿ ಒಳಗಾಗಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಒಂದು ಹಂತದ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಗಳು ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಂದು ಕಾಲಕ್ಕೆ ರಾಮಮಂದಿರ ನಿರ್ಮಾಣ ಅನ್ನೋದು ಕನಸಾಗಿತ್ತು. ಆದರೆ, ಇನ್ನೊಂದು ವರ್ಷದಲ್ಲಿ ರಾಮಮಂದಿರ ನಿರ್ಮಾಣದ ಕಾರ್ಯ ಪೂರ್ಣಗೊಳ್ಳುತ್ತದೆ. ರಾಮ ಮಂದಿರ ನಿರ್ಮಾಣವಾದ ನಂತರ ರಾಮರಾಜ್ಯ ನಿರ್ಮಾಣ ಆಗಬೇಕು ಎಂದು ಹೇಳಿದರು.
ರಾಮಮಂದಿರದ ನಂತರ ರಾಮರಾಜ್ಯ ನಿರ್ಮಾಣ : ಎಲ್ಲ ಕಡೆ ಇವತ್ತು ಹುಂಡಿಯಲ್ಲಿ ಹಾಕಿದ ಕಾಣಿಕೆ ಎಲ್ಲಿ ಹೋಯ್ತು ಅನ್ನೋ ಅಪವಾದ ಇದೆ. ನಾವು ಒಂದು ವರ್ಷಕ್ಕೆ ಐದು ಲಕ್ಷ ರೂಪಾಯಿ ಖರ್ಚು ಮಾಡುವವರು ಇದ್ದೇವೆ. ಐದು ಲಕ್ಷ ಖರ್ಚು ಮಾಡಿದರೆ ಒಂದು ಸುಂದರವಾದ ಸಣ್ಣ ಮನೆ ನಿರ್ಮಾಣವಾಗುತ್ತದೆ. ಹೀಗಾಗಿ ದಿನ ದಲಿತರಿಗೆ ಮನೆ ಕಟ್ಟಿಸಿ ಕೊಡೋಣ. ರಾಮ ದೇವರ ಹೆಸರಲ್ಲಿ ಹಣ ತೆಗೆದಿಡೋಣ. ರಾಮ ದೇವರ ಹೆಸರಲ್ಲಿ ಮನೆ ಕಟ್ಟಿಸಿ ದಾನ ಮಾಡೋಣ. ರಾಮಭಕ್ತಿ ಬೇರೆ ಅಲ್ಲ, ದೈವ ಭಕ್ತಿ ಬೇರೆ ಅಲ್ಲ. ದೇಶ ಭಕ್ತಿ ಬೇರೆ ಅಲ್ಲ. ಇವತ್ತು ರಾಮರಾಜ್ಯ ಆಗಬೇಕೆಂದರೆ ಪ್ರಜೆಗಳು ರಾಜರಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಮನ ಗುಣವನ್ನು ಅಳವಡಿಕೊಳ್ಳಬೇಕು :ಪ್ರತಿಯೊಬ್ಬರೂ ರಾಮನ ಗುಣವನ್ನು ಅಳವಡಿಸಿಕೊಳ್ಳಬೇಕು. ಮುಂದಿನ ಮಾರ್ಚ್ ವೇಳೆಗೆ ನಮಗೆ 60 ವರ್ಷ ತುಂಬುತ್ತದೆ. ಹೀಗಾಗಿ ಆರು ಮನೆ ದಾನ ಮಾಡಲು ತೀರ್ಮಾನ ಮಾಡಿದ್ದೇವೆ. ನಾವು ಪ್ರಧಾನಿ ಮೋದಿ ಅವರಿಗೆ ರಾಮರಾಜ್ಯದ ಸಂಕಲ್ಪ ಮಾಡಲು ಮನವಿ ಮಾಡುತ್ತೇವೆ. ರಾಮ ರಾಜ್ಯದ ಕುರಿತು ಮೋದಿ ಅವರಿಗೆ ಪತ್ರ ಬರೆಯುವುದಾಗಿ ಹೇಳಿದರು. ರಾಮ ಹೆಸರಿನಲ್ಲಾದರೂ ಒಳ್ಳೆಯದನ್ನು ಮಾಡಲಿ. ರಾವಣನ ಹೆಸರಲ್ಲಿ ಆದರೂ ಒಳ್ಳೆಯದ್ದು ಮಾಡಲಿ. ಒಟ್ಟಿನಲ್ಲಿ ದೇಶಕ್ಕೆ ಒಳ್ಳೆಯದಾಗಬೇಕು ಎಂದು ಹೇಳಿದರು.