ಹುಬ್ಬಳ್ಳಿ:ಹು - ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ನನ್ನ ಎರಡು ಅವಧಿಯಲ್ಲಿ ಸರಿ ಸುಮಾರು 1200 ಕೋಟಿಗೂ ಅಧಿಕ ಅನುದಾನ ತಂದಿದ್ದೇನೆ. ಆದರೆ ಅಭಿವೃದ್ಧಿ ಮರೆತಿರುವ ಬಿಜೆಪಿ ನಾಯಕರಿಗೆ ನನ್ನ ವಿರುದ್ಧ ಆರೋಪ ಮಾಡಲು ಯಾವುದೇ ವಿಷಯಗಳಿಲ್ಲ, ಸುಳ್ಳನ್ನು ನೂರು ಬಾರಿ ಹೇಳಿ ಸತ್ಯ ಮಾಡಲು ಬಿಜೆಪಿಯವರು ಹೆಣಗಾಡುತ್ತಿದ್ದಾರೆಂದು ಶಾಸಕ ಪ್ರಸಾದ್ ಅಬ್ಬಯ್ಯ ಬಿಜೆಪಿಯ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನನ್ನ ವಿರುದ್ಧ ವಿನಾಕಾರಣ ಬಿಜೆಪಿಯ ಕೆಲನಾಯಕರು ಪ್ರತಿಭಟನೆ ನಡೆಸಿ ಸುಳ್ಳು ಆರೋಪ ಮಾಡಿದ್ದಾರೆ. ಎರಡು ಅವಧಿಯಲ್ಲಿ ನನ್ನ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಸಂಪೂರ್ಣ ಮಾಹಿತಿಯನ್ನು ಪುಸ್ತಕ ರೂಪದಲ್ಲಿ ಜನರ ಕೈಯಲ್ಲಿ ನೀಡುತ್ತೇನೆ. ಅಭಿವೃದ್ಧಿ ಮರೆತು ಕೇವಲ ಧರ್ಮ, ಜಾತಿ ಭಾವನೆಗಳ ಮೇಲೆ ರಾಜಕಾರಣ ಮಾಡುವ ಬಿಜೆಪಿ ನಾಯಕರ ಮಾರ್ಕ್ಸ್ ಕಾರ್ಡ್ ನನಗೆ ಬೇಕಿಲ್ಲ, ಅವರ ಪಕ್ಷದ ಮುಖ್ಯಮಂತ್ರಿ ಆದಿಯಾಗಿ ಅವರ ಪಕ್ಷದ ಹಿರಿಯ ನಾಯಕರು ನನ್ನ ಅಭಿವೃದ್ಧಿ ಕಾರ್ಯಗಳನ್ನು ಬಹಿರಂಗ ಕಾರ್ಯಕ್ರಮಗಳಲ್ಲಿಯೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
ಮಾಜಿ ಶಾಸಕ ವೀರಭದ್ರಪ್ಪ ಹಾಲರವಿ ಅವರು ಈ ಹಿಂದೆ ಕ್ಷೇತ್ರಕ್ಕೆ ಏನೂ ಕೊಡುಗೆ ನೀಡಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. ಅವರ ಅವಧಿಯಲ್ಲಿ ಐದು ವರ್ಷ ನಿದ್ದೆ ಮಾಡಿ ಎದ್ದು ಹೋಗಿದ್ದೆ ಅವರ ಸಾಧನೆ. ಕನಿಷ್ಠ ಪಕ್ಷ ಅವರ ಸಮಾಜದ ಜನರಿಗೆ ನ್ಯಾಯ ಕೊಡಲು ಆಗಲಿಲ್ಲ, ಆದರೆ, ಕ್ಷೇತ್ರದ ಇಂದಿರಾನಗರ, ಎಸ್.ಎಮ್.ಕೃಷ್ಣ ನಗರ ಸೇರಿದಂತೆ ಮುಂತಾದ ಕಡೆಗಳಲ್ಲಿನ ಸಮಾಜದ ಪಂಚ ಕಮಿಟಿಯವರೇ ನನ್ನ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸಿ ಹಾಲರವಿ ಅವರನ್ನು ತೆಗಳಿದ ನಿದರ್ಶನಗಳಿವೆ ಎಂದು ಕುಟುಕಿದರು.
ಕ್ಷೇತ್ರದಲ್ಲಿ ಅನೇಕ ಆಸ್ಪತ್ರೆ ನಿರ್ಮಾಣ: ರಾಜಕೀಯಕ್ಕೆ ಸದ್ಯ ಕಾಲಿಡುತ್ತಿರುವ ಡಾ.ಕ್ರಾಂತಿಕಿರಣ ಶಾಲಾ - ಕಾಲೇಜು, ಆಸ್ಪತ್ರೆ ತಂದಿಲ್ಲ ಎಂದು ಆರೋಪಿಸಿದ್ದಾರೆ. ನಾನು ಕ್ಷೇತ್ರದಲ್ಲಿ ಅನೇಕ ಆಸ್ಪತ್ರೆ ನಿರ್ಮಾಣ ಮಾಡಿದ್ದೇನೆ. ಇರುವ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಿದ್ದೇನೆ. ಹೈಟೆಕ್ ಆಸ್ಪತ್ರೆ ನಿರ್ಮಾಣಕ್ಕೆ ಬಿಜೆಪಿ ಸರ್ಕಾರ ಅನುದಾನ ಕೊಡದೇ ಸತಾಯಿಸಿದ್ದು, ಇದೀಗ ಮಹಾನಗರ ಪಾಲಿಕೆಯಿಂದ ಭರಿಸುವಂತಾಗಿದೆ ಎಂದು ಹರಿಹಾಯ್ದರು. ಇನ್ನು ಡಾ.ಕ್ರಾಂತಿಕಿರಣ ಮೊದಮೊದಲು ಗೌಡ ಸಮುದಾಯಕ್ಕೆ ಸೇರಿದವನು ಎಂದು ಹೇಳಿಕೊಂಡು ಓಡಾಡುತ್ತಿದ್ದ ಅವರು ಇದೀಗ ಚುನಾವಣೆಗಾಗಿ ಎಸ್ಸಿ ಎಂದು ಹೇಳುತ್ತಿದ್ದಾರೆ ಎಂದು ಟೀಕಿಸಿದರು.