ಹುಬ್ಬಳ್ಳಿ: ಕೋವಿಡ್ ನಿಯಂತ್ರಿಸಲು ರಾಜ್ಯ ಸರ್ಕಾರ ಕಠಿಣ ನಿಯಮ ಜಾರಿ ಮಾಡಿದೆ. ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ ಅಂಥವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಆದರೆ ಹುಬ್ಬಳ್ಳಿಯಲ್ಲಿ ಮಾತ್ರ ಈ ಕೋವಿಡ್ ನಿಯಮ ಸಾಮಾನ್ಯರಿಗೊಂದು, ಪ್ರಭಾವಿಗಳು ಮತ್ತೊಂದು ಎನ್ನುವಂತಾಗಿದೆ.
ಮಗಳ ಮದುವೆಗೆ ರೋಡ್ ಮಾಡಿಸಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಈಗ ಮತ್ತೊಮ್ಮೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಮದುವೆಗೆ 100 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ ಕೇಂದ್ರ ಸಚಿವರ ಮಗಳ ಮದುವೆಗೆ 8 ಸಾವಿರ ಜನರಿಗೆ ಆಸನ, ಊಟದ ವ್ಯವಸ್ಥೆ ಹಾಗೂ ಪೆಂಡಲ್ ಸಿದ್ದವಾಗುತ್ತಿದೆ. ಮೂರು ಎಕರೆ ಜಾಗದಲ್ಲಿ ಬೃಹತ್ ಶಾಮಿಯಾನ ಹಾಕಲಾಗಿದೆ.
ಇದೇ ಸಪ್ಟೆಂಬರ್ 2 ರಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಗಳ ಮದುವೆ ನಡೆಯುತ್ತಿರುವುದರಿಂದ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ವೇದಿಕೆ ಸಿದ್ದವಾಗುತ್ತಿದೆ. ಮಗಳ ಮದುವೆಗೆ ಕೇಂದ್ರ ನಾಯಕರಾದ ಅಮಿತ್ ಶಾ, ಸಿಎಂ ಬೊಮ್ಮಾಯಿ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ. ಇವರನ್ನು ಹೊರತು ಪಡಿಸಿ ಧಾರವಾಡ ಲೋಕಸಭಾ ವ್ಯಾಪ್ತಿಯ ಜನರಿಗೆ ಮದುವೆಗೆ ಆಹ್ವಾನ ನೀಡಲಾಗಿದೆ.
ಮೂರನೇ ಅಲೆ ಹಿನ್ನೆಲೆಯಲ್ಲಿ ನೈಟ್ ಕರ್ಪ್ಯೂವನ್ನು ಸರ್ಕಾರ ಜಾರಿ ಮಾಡಿದೆ. ಇಷ್ಟಿದ್ದರೂ ಮದುವೆಯಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಇಲ್ಲಿಂದ ಕೊರೊನಾ ಹರಡಿದ್ರೆ ಹೊಣೆ ಯಾರು? ಏನೂ ಮಾಡುತ್ತಿದೆ ಧಾರವಾಡ ಜಿಲ್ಲಾಡಳಿತ? ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದವರ ಮೇಲೆ ಕ್ರಮ ಕೈಗೊಳ್ಳುವವರು ಯಾರು? ಮದುವೆಗೆ 100 ಜನಕ್ಕಿಂತ ಹೆಚ್ಚಿದ್ರೆ ಕೇಸ್ ಹಾಕುತ್ತೇವೆ ಎನ್ನುವ ಧಾರವಾಡ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಈಗ ಏನು ಹೇಳುತ್ತಾರೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.