ಧಾರವಾಡ:ರಾಜ್ಯದ ಕೆಲವೆಡೆ ರೆಮಿಡಿಸಿವರ್ ಕೊರತೆ ಹಿನ್ನೆಲೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ರೆಮಿಡಿಸಿವರ್ ಲಭ್ಯತೆ ಇದೆ ಎಂದು ಮಾಹಿತಿ ನೀಡಿದ್ದಾರೆ.
ಕೊರೊನಾ ಮುನ್ನೆಚ್ಚರಿಕೆ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಿಮ್ಸ್ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ತಲಾ 200 ಕ್ಕಿಂತ ಹೆಚ್ಚು ಸಂಗ್ರಹವಿದೆ. ಜಿಲ್ಲಾ ಔಷಧ ಉಗ್ರಾಣದಲ್ಲಿ 500ಕ್ಕೂ ಹೆಚ್ಚು ಸಂಗ್ರಹವಿದೆ. ಖಾಸಗಿ ಆಸ್ಪತ್ರೆಯಲ್ಲಿ 1000ಕ್ಕಿಂತ ಹೆಚ್ಚು ಬಂದಿವೆ. ಅಲ್ಲದೇ ಕೋವಿಡ್ ಲಸಿಕೆ ಕೂಡಾ ಇದೆ ಎಂದರು.
ಜಿಲ್ಲೆಯಲ್ಲಿ ಕೊರೊನಾ ಹೆಚ್ಚಳ ಹಿನ್ನೆಲೆ ಹುಬ್ಬಳ್ಳಿ ಕಿಮ್ಸ್ನಲ್ಲಿ 97, ಜಿಲ್ಲಾಸ್ಪತ್ರೆಯಲ್ಲಿ 57 ಜನ ರೋಗಿಗಳಿದ್ದಾರೆ. 32 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ 837 ಸಕ್ರಿಯ ಪ್ರಕರಣಗಳಿವೆ. 500 ಜನ ಹೋಮ್ ಐಸೋಲೇಷನಲ್ಲಿದ್ದಾರೆ. ಹದಿನೈದು ದಿನಗಳಲ್ಲಿ 15 ಜನ ಮೃತಪಟ್ಟಿದ್ದಾರೆ ಎಂದರು.
ಖಾಸಗಿ ಆಸ್ಪತ್ರೆಯವರ ಜೊತೆ ಸಭೆ ಮಾಡಿದ್ದೇವೆ. ಮತ್ತೆ ಶೇಕಡಾ 50ರಷ್ಟು ಬೆಡ್ ಕೊಡುವಂತೆ ಕೇಳಿದ್ದೇವೆ. ಸುಮಾರು 20 ಖಾಸಗಿ ಆಸ್ಪತ್ರೆಗಳು ಮುಂದೆ ಬಂದಿವೆ. 100 ರೋಗಿಗಳಿಗಿಂತ ಹೆಚ್ಚು ಜನ ಖಾಸಗಿ ಆಸ್ಪತ್ರೆಯಲ್ಲಿ ಇದ್ದಾರೆ. ಎಲ್ಲಾ ಖಾಸಗಿ ಆಸ್ಪತ್ರೆ ಸೇರಿ 250 ಬೆಡ್ ಮೀಸಲಿರಿಸಿದ್ದಾರೆ ಎಂದರು.
ಕಳೆದ ಸಲದಂತೆ 600 ಬೆಡ್ವರೆಗೂ ಕೊಡಲು ಒಪ್ಪಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ 125 ಬೆಡ್ ರೆಡಿ ಮಾಡಿದ್ದೇವೆ. 50 ಬೆಡ್ ತುಂಬಿವೆ, 75 ಬೆಡ್ ಖಾಲಿಯಿವೆ. ಕಲಘಟಗಿ, ಕುಂದಗೋಳ, ನವಲಗುಂದ ತಾಲೂಕಾಸ್ಪತ್ರೆಯಲ್ಲಿ ತಲಾ 50 ಬೆಡ್ ಮಾಡಿದ್ದೇವೆ. ಕಳೆದ ಸಲದಂತೆ ಬೆಡ್ ರೆಡಿ ಮಾಡಿಕೊಂಡಿದ್ದೇವೆ ಯಾವುದೇ ರೀತಿಯ ಸಮಸ್ಯೆಯಿಲ್ಲ. ಜಿಲ್ಲೆಯಲ್ಲಿ ವೆಂಟಿಲೇಟರ್ ಸಹ ಇದೆ. ಮುಂದಿನ ಹದಿನೈದು ದಿನಗಳವರೆಗೆ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.