ಧಾರವಾಡ : ನಗರದ ಮೌನೇಶ್ವರ ಗುಡಿ ಓಣಿಯ ರಸ್ತೆ ಚರಂಡಿಯಲ್ಲಿ ನವಜಾತ ಶಿಶುವೊಂದು ಪತ್ತೆಯಾಗಿದೆ. ರಾತ್ರಿ ಮಗು ಅಳುತ್ತಿರುವ ಶಬ್ದ ಕೇಳಿದ ಕೆಲ ಮಕ್ಕಳು ನಂತರ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಸಾರ್ವಜನಿಕರು ಗಂಡು ಮಗುವನ್ನು ರಕ್ಷಣೆ ಮಾಡಿ ಧಾರವಾಡ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. ಧಾರವಾಡದ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಜಿಲ್ಲಾಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಶಿಶುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ನವಜಾತ ಹೆಣ್ಣು ಶಿಶು ಪತ್ತೆ : ಹೆಣ್ಣು ಎಂಬ ಕಾರಣಕ್ಕೆ ಆಗ ತಾನೇ ಹುಟ್ಟಿದ್ದ ಮಗುವನ್ನು ಎಸೆದು ಹೋಗಿದ್ದ ಘಟನೆ ಜೂನ್ 14ರಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಪ್ರಗತಿ ನಗರದಲ್ಲಿ ನಡೆದಿತ್ತು. ಬಳಿಕ, ಮಗುವನ್ನು ಮಹಿಳೆಯರು ರಕ್ಷಣೆ ಮಾಡಿದ್ದರು. ನಂತರ ಕೊಪ್ಪಳದ ಜಿಲ್ಲಾ ಆಸ್ಪತ್ರೆಯ ನವಜಾತ ಶಿಶುಗಳ ವಿಭಾಗದಲ್ಲಿ ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಬಳಿಕ ಮಗು ಸಂಪೂರ್ಣವಾಗಿ ಚೇತರಿಸಿಕೊಂಡಿತ್ತು.
ಬಸ್ಸ್ಟ್ಯಾಂಡ್ನಲ್ಲಿ 7 ದಿನದ ಗಂಡು ಮಗು ಪತ್ತೆ : ಏಪ್ರಿಲ್ ತಿಂಗಳಲ್ಲಿ ಚಾಮರಾಜನಗರದ ಹನೂರಿನ ಖಾಸಗಿ ಬಸ್ ನಿಲ್ದಾಣದಲ್ಲಿ ನವಜಾತ ಶಿಶುವೊಂದನ್ನು ಬ್ಯಾಗ್ನಲ್ಲಿಟ್ಟು ಪಾಲಕರು ನಾಪತ್ತೆಯಾಗಿರುವ ಘಟನೆ ನಡೆದಿತ್ತು. ಬ್ಯಾಗ್ವೊಂದರಲ್ಲಿ ಮಗುವನ್ನು ಇಟ್ಟು ಹೋಗಿದ್ದು, ಬಳಿಕ ಬ್ಯಾಗ್ ಬಳಿ ಯಾರೂ ಇಲ್ಲದ್ದನ್ನು ಗಮನಿಸಿದ ಸಾರ್ವಜನಿಕರು ಅದನ್ನು ತೆರೆದು ನೋಡಿದಾಗ 7 ದಿನದ ಗಂಡು ಮಗು ಇರುವುದು ಕಂಡುಬಂದಿತ್ತು.
ಇದನ್ನೂ ಓದಿ :ಬಸ್ ನಿಲ್ದಾಣದಲ್ಲಿ ನವಜಾತ ಶಿಶು ಪತ್ತೆ; ತಮಗೇ ಮಗು ಕೊಡಿ ಎಂದು ಹಲವರ ದುಂಬಾಲು