ಹುಬ್ಬಳ್ಳಿ: ಮೂರುಸಾವಿರ ಮಠದ ವಿವಾದ ಸದ್ಯಕ್ಕೆ ಮುಗಿಯುವ ಹಾಗೆ ಕಾಣುತ್ತಿಲ್ಲ. ವಿವಾದಕ್ಕೆ ತೆರೆ ಎಳೆಯಬೇಕಿದ್ದ ಮಠದ ಉನ್ನತ ಸಮಿತಿಯವರು ಮೌನಕ್ಕೆ ಶರಣಾಗಿರೋದು ದಿನೇ ದಿನೆ ವಿವಾದ ಹೊಸ ತಿರುವು ಪಡೆದುಕೊಳ್ಳವುದಕ್ಕೆ ಕಾರಣವಾಗಿದೆ.
ಆಸ್ತಿ ವಿವಾದವಾಯ್ತು, ಮೂರುಸಾವಿರ ಮಠದಲ್ಲಿ ಈಗ ಉತ್ತರಾಧಿಕಾರಿ ವಿಷಯ ಮುನ್ನೆಲೆಗೆ! - ದಿಂಗಾಲೇಶ್ವರ ಶ್ರೀ
ಹುಬ್ಬಳ್ಳಿಯ ಮೂರುಸಾವಿರ ಮಠದ ಆಸ್ತಿ ವಿವಾದ ಈಗ ಮತ್ತೊಂದು ತಿರುವು ಪಡೆದುಕೊಳ್ಳುತ್ತಿದೆ. ಇಷ್ಟು ದಿನ ಕೆಎಲ್ಇ ಸಂಸ್ಥೆಗೆ ಆಸ್ತಿ ನೀಡಿದ ವಿಚಾರ ವಿವಾದಕ್ಕೆ ಕಾರಣವಾಗಿತ್ತು. ಈಗ ಮತ್ತೆ ಉತ್ತರಾಧಿಕಾರಿ ವಿವಾದವು ಮುನ್ನೆಲೆಗೆ ಬಂದಿದ್ದು, ಮೂಜಗು ಶ್ರೀಗಳು ಮಠ ಬಿಟ್ಟು ಹೋಗಲು ಸಿದ್ಧರಾದ್ದಾರೆ ಎನ್ನುವ ಚರ್ಚೆ ಶುರುವಾಗಿದೆ.
ಕೆಎಲ್ಇ ಸಂಸ್ಥೆಗೆ ಮಠದ ಭೂಮಿ ದಾನವಾಗಿ ನೀಡಿರುವುದು ಭಾರಿ ವಿವಾದಕ್ಕೆ ಕಾರಣವಾಗಿದ್ದು, ಆಸ್ತಿ ಮರಳಿಸುವಂತೆ ದಿಂಗಾಲೇಶ್ವರ ಶ್ರೀ ಹೋರಾಟ ನಡೆಸಿದ್ದಾರೆ. ಇದರ ನಡುವೆ ಈಗ ಮತ್ತೆ ಮಠದ ಉತ್ತರಾಧಿಕಾರಿ ವಿಚಾರವು ಮುನ್ನೆಲೆಗೆ ಬಂದಿದೆ. ಕಳೆದ ರಾತ್ರಿ ಇದ್ದಕ್ಕಿದ್ದಂತೆ ತಿಪಟೂರಿನ ರುದ್ರಮುನಿ ಸ್ವಾಮಿಗಳು ಮೂರುಸಾವಿರ ಮಠಕ್ಕೆ ಭೇಟಿ ನೀಡಿದ್ದಾರೆ. ಮೂಜಗು ಶ್ರೀಗಳ ಜೊತೆ ಗುಪ್ತ ಸಭೆ ನಡೆಸುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಬೆಂಗಳೂರಿನಲ್ಲಿದ್ದ ಉನ್ನತ ಸಮಿತಿ ಸದಸ್ಯ ಶಂಕ್ರಣ್ಣ ಮುನವಳ್ಳಿ ಸಹ ನೇರವಾಗಿ ಮಠಕ್ಕೆ ಬಂದು ಸ್ವಾಮಿಜಿಗಳ ಜೊತೆಗೆ ಚರ್ಚೆ ನಡೆಸಿದ್ದಾರೆ.
ತಡರಾತ್ರಿ ಸ್ವಾಮಿಜಿಗಳಿಬ್ಬರ ಸಭೆ ಹಲವು ಅನುಮಾನಗಳನ್ನು ಹುಟ್ಟು ಹಾಕಿದ್ದು, ಉತ್ತರಾಧಿಕಾರಿ ವಿವಾದಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಶಂಕರಣ್ಣ ಮುನ್ನವಳ್ಳಿ ಅವರನ್ನು ಕೇಳಿದ್ರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಕೆಲವು ವರ್ಷಗಳಿಂದ ಮೂರುಸಾವಿರ ಮಠದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಂದ ಈಗಿನ ಮೂಜಗು ಶ್ರೀಗಳು ನೊಂದಿದ್ದಾರೆ ಎನ್ನಲಾಗುತ್ತಿದೆ. ಅದರಲ್ಲೂ ಇತ್ತಿಚಿಗೆ ಕೆಎಲ್ಇ ಸಂಸ್ಥೆಗೆ ಆಸ್ತಿ ಪರಭಾರೆ ವಿಚಾರ ಸಾಕಷ್ಟು ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಮೂಜಗು ಶ್ರೀಗಳು ಮೂರುಸಾವಿರ ಮಠ ಬಿಟ್ಟು ಹಾನಗಲ್ ಕುಮಾರಸ್ವಾಮಿ ಮಠಕ್ಕೆ ತೆರಳಲು ನಿರ್ಧರಿಸಿದ್ದಾರೆನ್ನುವ ಸುದ್ದಿ ದಟ್ಟವಾಗಿ ಹಬ್ಬುತ್ತಿದೆ. ಈ ಹಿಂದೆಯು ಉತ್ತರಾಧಿಕಾರಿ ವಿವಾದದಿಂದ ಮನನೊಂದು ಮಠ ತೊರೆದು ಹಾನಗಲ್ ಮಠಕ್ಕೆ ತೆರಳಿದ್ದರು. ಈಗ ಮಠದ ಆಸ್ತಿ ಪರಭಾರೆ ವಿಚಾರವಾಗಿ ಉನ್ನತ ಸಮಿತಿ ಸದಸ್ಯ ಶಂಕರಣ್ಣ ಮುನವಳ್ಳಿ, ದಿಂಗಾಲೇಶ್ವರ ಶ್ರೀಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.