ಧಾರವಾಡ: ಮುಖ್ಯಮಂತ್ರಿ ರೇಸ್ ನಲ್ಲಿದ್ದ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಅವರಿಗೆ ಸ್ವಪಕ್ಷದಲ್ಲೇ ಸ್ಪರ್ಧಿಗಳು ಎದುರಾಗಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಪರಿಗಣಿಸಿ ಎಂದು ಹುಬ್ಬಳ್ಳಿ ಧಾರವಾಡ ಪಾಲಿಕೆ ಮೇಯರ್ ಈರೇಶ ಅಂಚಟಗೇರಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ ಅವರಿಗೆ ಮನವಿ ಸಲ್ಲಿಸಿದ್ದಾರೆ. ಈ ಬಾರಿ ನನಗೆ ಟಿಕೆಟ್ ಕೊಡಿ ಎಂದು ಹು-ಧಾ ಮಹಾನಗರ ಪಾಲಿಕೆ ಮೇಯರ್ ಮನವಿ ಮಾಡಿದ್ದಾರೆ. ಈಗಾಗಲೇ ಬಿಜೆಪಿಯಿಂದ ಬೆಲ್ಲದ್ ಕುಟುಂಬಕ್ಕೆ ಕಳೆದ 30 ವರ್ಷಗಳಿಂದ ಟಿಕೆಟ್ ನೀಡುತ್ತಾ ಬಂದಿರುತ್ತದೆ. ಈ ಬಾರಿ ಬೆಲ್ಲದ್ ಕುಟುಂಬಕ್ಕೆ ಟಿಕೆಟ್ ತಪ್ಪಿಸಲು ಸ್ಥಳೀಯ ನಾಯಕರು ಕಸರತ್ತು ನಡೆಸಿರುವುದು ಇದರಿಂದ ಮೇಲ್ನೋಟಕ್ಕೆ ಕಂಡುಬಂದಿದೆ.
ನನಗೂ ಒಂದು ಅವಕಾಶ ನೀಡಿ ಎಂದು ಪಾಲಿಕೆ ಮೇಯರ್ ಮನವಿ ಮಾಡಿಕೊಂಡಿದ್ದಾರೆ. 30 ವರ್ಷಗಳಿಂದ ಅಂಚಟಗೇರಿ ಸಕ್ರಿಯ ಕಾರ್ಯಕರ್ತನಾಗಿದ್ದಾರೆ. ಈ ಹಿನ್ನೆಲೆ ಈ ಬಾರಿ ನನಗೆ ಟಿಕೆಟ್ ನೀಡಿ ಎಂದು ಮನವಿ ಸಲ್ಲಿಕೆ ಮಾಡಿದ್ದಾರೆ. ಅಂಚಟಗೇರಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಅತ್ಯಾಪ್ತರಾಗಿದ್ದಾರೆ.
ಇದೀಗ ನಾಯಕರ ಜೊತೆ ಚರ್ಚೆ ಮಾಡಿ ಟಿಕೆಟ್ಗಾಗಿ ಅಂಚಟಗೇರಿ ಬೇಡಿಕೆ ಇಟ್ಟಿದ್ದಾರೆ. ಧಾರವಾಡ ಪಶ್ಚಿಮ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಈ ಕ್ಷೇತ್ರದಲ್ಲಿ ಈಗಾಗಲೇ ಅಂಚಟಗೇರಿ ಟಿಕೆಟ್ ಕೇಳುತ್ತಿದ್ದಾರೆ ಎಂದು ಗುಮಾನಿ ಎದ್ದಿತ್ತು. ಇದೀಗ ಮೇಯರ್ ಮನವಿ ಪತ್ರ ಬರೆದು ಟಿಕೆಟ್ ಕೇಳಿರುವುದು ಹುಬ್ಬಳ್ಳಿ-ಧಾರವಾಡ ಅವಳಿ ನಗರ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲಾ ಎಂಬುದನ್ನು ಬಹಿರಂಗ ಪಡಿಸಿದಂತಾಗಿದೆ. ಒಟ್ಟಿನಲ್ಲಿ ಶಾಸಕ ಅರವಿಂದ ಬೆಲ್ಲದ್ ಸ್ವಪಕ್ಷದಲ್ಲಿ ವಿರೋಧಿಗಳು ಎದುರಾಗಿದ್ದಾರೆ.